ನವದೆಹಲಿ: ವಿವಾದಾತ್ಮಕ ಪೋಸ್ಟ್‌ ಮಾಡಿದ ಕಂಗನಾ ರಣಾವತ್‌ಗೆ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿಯು ಸಮನ್ಸ್ ಜಾರಿ ಮಾಡಿದ್ದು ಡಿಸೆಂಬರ್ 6 ರಂದು ಮಧ್ಯಾಹ್ನ12 ಗಂಟೆಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದೆ.

ಡಿಸೆಂಬರ್ 6 ರಂದು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಮೂಲಕ ಸಿಖ್ಖರ ವಿರುದ್ಧ ಮಾಡಿದ ಟೀಕೆಗಳ ಕುರಿತು ಸ್ಪಷ್ಟನೆ ನೀಡುವಂತೆ ಸಮನ್ಸ್ ಜಾರಿ ಮಾಡಿದ್ದು, ಆಮ್ ಅದ್ಮಿ ಶಾಸಕ ರಾಘವ ಚಡ್ಡಾ ನೇತೃತ್ವದ ಸಮಿತಿ ಮುಂದೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚನೆ ನೀಡಲಾಗಿದೆ. ಸಿಖ್ಖರ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ದಾಖಲಾಗಿರುವ ದೂರುಗಳ ಆಧಾರದ ಮೇಲೆ ಈ ನೋಟಿಸ್ ಜಾರಿ ಮಾಡಲಾಗಿದೆ.

‘ಕಾಶ್ಮೀರ ಉಳಿಸಿಕೊಳ್ಳಲು ಬಯಸಿದರೆ 370ನೇ ವಿಧಿಯನ್ನು ಪುನಃಸ್ಥಾಪಿಸಬೇಕು’ – ಮೆಹಬೂಬಾ ಮುಫ್ತಿ

ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ ಪೋಸ್ಟ್ ಬೃಹತ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ವಿಶ್ವದಾದ್ಯಂತ ಸುಮಾರು 80 ಲಕ್ಷ ಜನರು ಅವರನ್ನು ಅನುಸರಿಸುತ್ತಿದ್ದಾರೆ. ಕಂಗನಾ ಪೋಸ್ಟ್‌ ನಿರ್ದಿಷ್ಟವಾಗಿ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ನಿದರ್ಶನಗಳನ್ನು ವಿವರಿಸುತ್ತದೆ ಮತ್ತು ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಪ್ರಯತ್ನವಾಗಿದೆ ಎಂದು ಸಮಿತಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳ ನಂತರ ನಗರದಲ್ಲಿ ಶಾಂತಿಗೆ ಭಂಗ ತರುವ ಘಟನೆಗಳನ್ನು ಪರಿಶೀಲಿಸುವ ಆದೇಶದೊಂದಿಗೆ ಈ ಸಮಿತಿಯನ್ನು ರಚಿಸಲಾಯಿತು. ಕಳೆದ ವಾರ, ಸಮಿತಿಯು ದ್ವೇಷದ ಭಾಷಣ ಮತ್ತು ಅದನ್ನು ಎದುರಿಸುವ ವೇದಿಕೆಯ ಪ್ರಯತ್ನಗಳ ಬಗ್ಗೆ ಫೇಸ್‌ಬುಕ್ ಅಧಿಕಾರಿಗಳನ್ನು ಪ್ರಶ್ನಿಸಿತು.

ಮೂರು ಕೃಷಿ ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಾಪಸ್ ಪಡೆದ ಬಳಿಕ ನಟಿ ಕಂಗನಾ ರಣಾವತ್, ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಖ್ ಪ್ರತಿಭಟನಾಕಾರರನ್ನು ಟಾರ್ಗೆಟ್ ಮಾಡಿ ಪೋಸ್ಟ್ ಮಾಡಿದ್ದರು.

ಕಂಗನಾ ಪೋಸ್ಟ್‌ ಏನಿತ್ತು?
ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕಂಗನಾ ಸ್ಟೋರಿ ಪಬ್ಲಿಶ್‌ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂದಿರಾಗಾಂಧಿಯ ಫೋಟೋ ಹಾಕಿ ರಾಷ್ಟ್ರದ ಆತ್ಮಸಾಕ್ಷಿಯು ಆಳವಾದ ನಿದ್ರೆಯಲ್ಲಿರುವಾಗ, ಲಾಠಿ ಒಂದೇ ಪರಿಹಾರ ಮತ್ತು ಸರ್ವಾಧಿಕಾರ ಒಂದೇ ಪರಿಹಾರ. ಜನ್ಮದಿನದ ಶುಭಾಶಯಗಳು ಮೇಡಂ ಪ್ರಧಾನ ಮಂತ್ರಿ ಎಂದು ಬರೆದಿದ್ದರು.

ಖಲಿಸ್ತಾನಿ ಉಗ್ರರು ಇಂದು ಸರ್ಕಾರವನ್ನು ತಿರುಚಬಹುದು. ಆದರೆ ಒಬ್ಬ ಮಹಿಳೆಯನ್ನು ನಾವು ಮರೆಯಬಾರದು. ಏಕೈಕ ಮಹಿಳಾ ಪ್ರಧಾನಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಇವರನ್ನು ಸೊಳ್ಳೆಗಳಂತೆ ತಮ್ಮ ಶೂ ಕೆಳಗೆ ಹೊಸಕಿ ಹಾಕಿದ್ದರು. ಆದರೆ ದೇಶವನ್ನು ಒಡೆಯಲು ಬಿಟ್ಟಿಲ್ಲ. ದಶಕಗಳ ನಂತರವೂ ಅವರ ಹೆಸರನ್ನು ಕೇಳಿದರೆ ಖಲಿಸ್ತಾನಿ ಉಗ್ರರು ಹೆದರಿ ನಡುಗುತ್ತಾರೆ. ಇವರಿಗೆ ಅಂತಹ ಗುರು ಬೇಕು ಎಂದಿದ್ದರು.