ಚಿತ್ರದುರ್ಗ : ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಬಿಡುಗಡೆ ಹೊಂದಿದ 1947 ಆಗಸ್ಟ್ 15ರ ಐತಿಹಾಸಿಕ ದಿನಕ್ಕೆ ಈ ಬಾರಿಯ ಆಗಸ್ಟ್ 15 ರಂದು 75 ವರ್ಷ ತುಂಬಲಿದೆ. ಆಜಾದಿ ಅಮೃತ ಮಹೋತ್ಸಹ ಆಚರಣೆಗೆ ದೇಶದೆಲ್ಲೆಡೆ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸ್ವಾತಂತ್ರ ಪಡೆದು ವಿಶ್ವಕ್ಕೆ ಮಾದರಿಯನಿಸುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಸಂಭ್ರಮದ 75 ವರ್ಷದ ಸ್ವಾತಂತ್ರ ದಿನಾಚರಣೆಗೆ ಕೋಟೆ ನಾಡು ಸಿದ್ಧವಾಗಿದೆ. ಐತಿಹಾಸಿ ಚಿತ್ರದುರ್ಗ ನಗರದಲ್ಲಿ ಸ್ವಾತಂತ್ರೋತ್ಸವದ ಕಹಳೆ ಮೊಳಗಲಿದೆ.

ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿ.ಪಂ.ಸಿಇಓ ಡಾ.ನಂದಿನಿದೇವಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಸೇರಿದಂತೆ ಜನಪ್ರತಿನಿಧಿಗಳು ಗಣ್ಯರು ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳುವರು.

ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ, ಅನುರಣಿಸಲಿದೆ ದೇಶ ಪ್ರೇಮ: ಆಜಾದಿ ಅಮೃತ ಮಹೋತ್ಸಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಕರೆ ನೀಡಿದ್ದು, ಜಿಲ್ಲೆಯ ಪ್ರತಿ ಮನೆಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸಲಿದೆ. ಇದಕ್ಕಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2.5 ಲಕ್ಷ ತ್ರಿವರ್ಣ ಧ್ವಜಗಳನ್ನು ಜಿಲ್ಲೆಯಲ್ಲಿ ಮಾರಾಟ ಮಾಡಲು ಇಲಾಖೆ ಪ್ರಸ್ತಾವನೆ ಸಲ್ಲಿಸಿಲಾಗಿತ್ತು. ಈಗಾಗಲೇ 50 ಸಾವಿರ ಧ್ವಜಗಳು ಬಂದಿವೆ. ಎರಡು ಮೂರು ದಿನಗಳಲ್ಲಿ ಪುನಃ 50 ಸಾವಿರ ಧ್ವಜಗಳು ಬರಲಿವೆ. ನಾಗರಿಕರಿಗೆ ಸುಭವಾಗಿ ಧ್ವಜಗಳು ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪೋಸ್ಟ್ ಆಫೀಸ್‍ಗಳಲ್ಲೂ ಧ್ವಜ ಮಾರಾಟ ಮಾಡಲಾಗುತ್ತಿದೆ. ನಗರ ಸಭೆ, ಪುರಸಭೆ, ಗ್ರಾಮಪಂಚಾಯಿತಿ, ಅಂಗನವಾಡಿಗಳ ಮೂಲಕ ಧ್ವಜ ವಿತರಣೆಗೆ ಕ್ರಮ ವಹಿಸಲಾಗಿದೆ. ಪ್ರತಿ ಧ್ವಜಕ್ಕೆ ರೂ.22 ನಿಗದಿ ಮಾಡಲಾಗಿದೆ. ಸಾರ್ವಜನಿಕರು ನಿಗದಿ ಪಡಿಸಿದ ದರ ಪಾವತಿಸಿ ಧ್ವಜ ಪಡೆದುಕೊಳ್ಳಬಹುದು. ಜಿ.ಪಂ. ವತಿಯಿಂದ ಹೆಚ್ಚಿನ ಅಗತ್ಯ ಇರುವ ಧ್ವಜಗಳನ್ನು ಸ್ಥಳೀಯ ಗಾರ್ಮೆಂಟ್‍ಗಳಿಂದ ಹೊಲಿಸಲಾಗುತ್ತಿದೆ. ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ದೇಶದ ಪ್ರೇಮ ಅನುರಣಿಸಲಿದೆ.

ಶಿಸ್ತಿನ ಕವಾಯತು, ನೃತ್ಯ ರೂಪಕ, ಸಾಂಸ್ಕøತಿಕ ಕಾರ್ಯಕ್ರಮ : ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಧ್ವಜಾರೋಹಣದ ತರುವಾಗಯ ಶಿಸ್ತಿನ ಕವಾಯತು ನಡೆಯಲಿದೆ. ಪೊಲೀಸ್, ಶಸಸ್ತ್ರ ಮೀಸಲು ಪಡೆ, ಗೃಹ ರಕ್ಷಕ, ಅರಣ್ಯ, ಅಗ್ನಿಶಾಮಕ, ಎನ್‍ಸಿಸಿ ಹಾಗೂ ಎನ್‍ಎಸ್‍ಎಸ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳ 22ಕ್ಕೂ ಹೆಚ್ಚು ತಂಡಗಳು ಕವಾಯತಿನಲ್ಲಿ ಭಾಗವಹಿಸಲಿವೆ. ದೇಶ ಭಕ್ತಿ ಭಿಂಬಿಸುವ ನೃತ್ಯ ರೂಪಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. ಸಂಜೆ 6 ಗಂಟೆಯಿಂದ ನಗರದ ತ.ರಾ.ಸು ರಂಗಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ಸ್ವಾತಂತ್ರೋತ್ಸವದ ಈ ಸಂಭ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಕೋರಿದ್ದಾರೆ