ಶ್ರೀ ಬೆಳಗೆರೆ ಸೀತಾರಾಮಶಾಸ್ತ್ರಿ (ಕ್ಷೀರ ಸಾಗರ) ಪರಿಚಯಾತ್ಮಕ ಲೇಖನ - BC Suddi
ಶ್ರೀ ಬೆಳಗೆರೆ ಸೀತಾರಾಮಶಾಸ್ತ್ರಿ (ಕ್ಷೀರ ಸಾಗರ) ಪರಿಚಯಾತ್ಮಕ ಲೇಖನ

ಶ್ರೀ ಬೆಳಗೆರೆ ಸೀತಾರಾಮಶಾಸ್ತ್ರಿ (ಕ್ಷೀರ ಸಾಗರ) ಪರಿಚಯಾತ್ಮಕ ಲೇಖನ

(ಜನನ : ೩೦-೦೪-೧೯೦೬, ಮರಣ : ೨೧-೦೨-೧೯೭೭).

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ದಿನಾಂಕ: ೩೦-೦೪-೧೯೦೬ರಲ್ಲಿ ಜನಿಸಿದರು. ತಾಯಿ ಅನ್ನಪೂರ್ಣಮ್ಮ, ತಂದೆ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು. ಬೆಳಗೆರೆ ವಂಶದಲ್ಲಿ ಹುಟ್ಟಿದ ಇವರ ಸಹೋದರ ಬೆಳಗೆರೆ ಕೃಷ್ಣಶಾಸ್ತ್ರಿ, ತಂಗಿಯರಾದ ಬೆಳಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ ಎಲ್ಲರದೂ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ. ಇದು ತಂದೆಯಿಂದ ಬಂದ ಬಳುವಳಿ. ತಂದೆ ಚಂದ್ರಶೇಖರ ಶಾಸ್ತ್ರಿಗಳು ಜಾನಪದ ಗೀತೆ, ಲಾವಣಿಗಳ ಅದ್ವಿತೀಯ ಹಾಡುಗಾರರಾಗಿದ್ದರು.

ಪ್ರಾರಂಭಿಕ ಶಿಕ್ಷಣ ಚಿತ್ರದುರ್ಗ, ಇಂಟರ್ ಮೀಡಿಯೇಟ್ ಓದಿದ್ದು ಮೈಸೂರಿನಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ ಪದವಿ, ಕಲ್ಕತ್ತಾ ವಿಶ್ವ ವಿದ್ಯಾನಿಲಯದ ಎಂ.ಎ ಪದವಿಯನ್ನು ಪಡೆದರು. ಕೈತುಂಬಾ ಸಂಬಳ ತರುವ ಹಲವಾರು ಹುದ್ದೆಗಳಿಗೆ ಆಹ್ವಾನ ಬಂದರೂ ಆರಿಸಿಕೊಂಡಿದ್ದು ಮಾತ್ರ ಅಧ್ಯಾಪಕ ವೃತ್ತಿ. ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ೧೯೨೮ ರಲ್ಲಿ ಸೇರಿ ೩೪ ವರ್ಷಗಳ ಸೇವೆಯ ನಂತರ ೧೯೬೨ ರಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದರು. ಕ್ಷೀರಸಾಗರರ ನಾಟಕಗಳು ಕೃತಿಗೆ ೧೯೬೮ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ, ದೇವರಾಜ ಬಹದ್ದೂರ್ ದತ್ತಿ ನಿಧಿಯ ಬಹುಮಾನ ಪಡೆದಿದ್ದಾರೆ.

ಬಿ.ಸೀತಾರಾಮ ಶಾಸ್ತ್ರಿಗಳು ಕ್ಷೀರಸಾಗರ ಎಂಬ ಕಾವ್ಯನಾಮದಿಂದ ಬಹುಸಂಖ್ಯೆಯಲ್ಲಿ ನಾಟಕಗಳನ್ನು ರಚಿಸಿ ನಾಟಕಕಾರರೆಂದೇ ಖ್ಯಾತರಾಗಿದ್ದಾರೆ. ಈ ನಾಟಕಗಳು ಆ ಶತಮಾನದ ಪೂರ್ವಾರ್ಧದಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದಲೂ, ಅಧ್ಯಾಪಕರುಗಳಿಂದಲೂ ಅಭಿನಯಿಸಲ್ಪಡುತ್ತಿದ್ದವು. ಕ್ಷೀರಸಾಗರ ನಾಟಕಗಳು ಎಂಬ ಹೆಸರಿನಿಂದ ಎರಡು ಭಾಗಗಳಲ್ಲಿ ಪ್ರಕಟವಾಗಿವೆ. ಋಷಿಮೋಹಿನಿ, ನಿಶ್ಚಿತಾರ್ಥ, ಕಾಶಿಯಾತ್ರೆ, ಲಕ್ಕೀ ಲಕ್ಷ್ಮಣನ್, ದೀಪಾವಳಿ, ನಿತ್ಯನಾಟಕದ ಮೊದಲ ಸಂಪುಟ, ಎರಡನೇ ಸಂಪುಟದಲ್ಲಿ ಕಲಹ ಕುತೂಹಲ, ಅರ್ಧನಾರಿ, ಪಾಟೀಪಾದ, ಅರ್ಧಾಂಗಿ, ರುಪಾಯಿಗಿಡ, ಪರಪಾಟು, ಚೋರ, ಚಪ್ಪಾಳೆ ವೈದ್ಯ, ನಮ್ಮೂರಿನ ಪಶ್ಚಿಮಕ್ಕೆ, ಬೆಸ್ಟ್ ಆಫ್ ತ್ರೀ (ಗಣಿತಶಾಸ್ತ್ರದ ನಾಟಕಗಳು) ಪ್ರಕಟಿತ. ಶಾಮಣ್ಣನ ಸಾಹಸ, ಲಾಯರ್ ಪ್ರಯಾಣ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಋಷಿಮೋಹಿನಿ ನಾಟಕವು ೧೯೬೭ ರಲ್ಲಿ ಎಸ್.ಎಸ್.ಎಲ್.ಸಿ ತರಗತಿಯ ಐಚ್ಛಿಕ ವಿಷಯವಾಗಿ ಆಯ್ಕೆ. ಬೆಸ್ಟ್ ಆಫ್ ತ್ರೀ ನಾಟಕವು ಬಾಂಬೆ ವಿಶ್ವವಿದ್ಯಾಲಯದ ೧೯೭೦-೭೨ ನೇ ಸಾಲಿನ ಇಂಟರ್ ಮೀಡಿಯೇಟ್ ತರಗತಿಯ ಪಠ್ಯಪುಸ್ತಕ. ಒಡೆದಕನ್ನಡಿ (ಕಾದಂಬರಿ), ವೀಳ್ಯ (ಕಥಾ ಸಂಕಲನ), ನಗರದ ಶ್ರೀರಂಗ ಕೊನೆ ದಿವಸ, ನೆಪೋಲಿಯನ್ ಬೋನಪಾರ್ಟೆ (ಜೀವನಚರಿತ್ರೆ) ಈ ಪುಸ್ತಕವು ೧೯೪೧ರಲ್ಲಿ ಇಂಟರ್ ಮೀಡಿಯೇಟ್ ತರಗತಿಯ ಪಠ್ಯಪುಸ್ತಕವಾಗಿತ್ತು. ರಾಧೆ (ಕವಿತಾ ಸಂಕಲನ) ಹೀಗೆ ಇತರ ಪ್ರಕಾರಗಳಲ್ಲಿಯೂ ಸಾಹಿತ್ಯಕೃಷಿ ಮಾಡಿದ್ದಾರೆ.

ಹಲವಾರು ದತ್ತಿ ನಿಧಿ ಸ್ಥಾಪಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತ್ಯುನ್ನತ ಶ್ರೇಣಿಯ ಪದವಿ ಪಡೆದವರಿಗೆ ಪ್ರಶಸ್ತಿ, ಮೈಸೂರು ವಿ.ವಿ.ದಲ್ಲಿ ಭಾಷಾಶಾಸ್ತ್ರದಲ್ಲಿ, ಎಂ.ಎ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದವರಿಗೆ ಕ್ಷೀರಸಾಗರ ಪ್ರಶಸ್ತಿ, ಬೆಳಗೆರೆಯಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಶಾರದಾ ಮಂದಿರ ಕಟ್ಟಡ ನಿರ್ಮಾಣ. ಬೆಳಗೆರೆಯಲ್ಲಿ ಇವರ ಹೆಸರಿನಲ್ಲಿ ಹೈಸ್ಕೂಲು. ಟಿ.ಎಸ್.ವೆಂಕಣ್ಣಯ್ಯ ಮತ್ತು ಬಿ. ಸೀತಾರಾಮಶಾಸ್ತ್ರಿಯವರ ಹೆಸರಿನ ಚಳ್ಳಕೆರೆ ಕಾಲೇಜಿನಲ್ಲಿ ಪರ್‍ಯಾಯ ಪಾರಿತೋಷಕ ಮುಂತಾದವು. ಕೆಲವರು ಪ್ರಶಸ್ತಿಗಳಿಗಾಗಿ ಹಪಹಪಿಸಿದರೆ ಇವರು ಇತರರಿಗೆ ಪ್ರಶಸ್ತಿ ಕೊಡುವುದರಲ್ಲಿ ಸಂತಸದಿಂದ ದಾನಿಗಳಾಗಿ ತೋರಿದ ಔದಾರ್ಯವಾಗಿದೆ.
ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಶಾಸ್ತ್ರಿಗಳು ಅಂತರಾಂಶ, ಕಲನವಿನ್ಯಾಸ (೧೯೬೩), ಸಂಖ್ಯೋದ್ಯಾನ ಮುಂತಾದ ಗಣಿತಶಾಸ್ತ್ರದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ನಾಟಕ ನಿರ್ದೇಶನ ಅವರ ಹವ್ಯಾಸಗಳಲ್ಲಿ ಸೇರಿತ್ತು. ದಿ: ೨೧-೦೨-೧೯೭೭ ರಂದು ಬೆಂಗಳೂರಿನಲ್ಲಿ ಮೃತರಾದರು.

(ಅಸಾಮಾನ್ಯ ಸಾಧಕರಿವರು. ಪರಿಚಯ ಎಲ್ಲರಿಗಿರಲಿ ಎಂಬುದು ನಮ್ಮೂರು ನನ್ನ ಸಾಹಿತಿ ಲೇಖನ ಮಾಹಿತಿ. ಈ ಸಾಧಕರು ಶ್ರಮಪಟ್ಟು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಳಿದ್ದರೆ ನಮಗೆ ಒದಗಿಸಿರಿ, ಚಿತ್ರದುರ್ಗ ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರವನ್ನು ಸಾಧ್ಯವಾದಷ್ಟು ಶ್ರೀಮಂತಗೊಳಿಸೋಣ. ಧನ್ಯವಾದಗಳು).

ಲೇಖನ: ಕೆ.ಪಿ.ಎಮ್.ಗಣೇಶಯ್ಯ,

ರಂಗನಿರ್ದೇಶಕರು, ಚಿತ್ರದುರ್ಗ-

೫೭೭೫೦೧, ದೂ:೯೪೪೮೬೬೪೮೭೮.