ನವದೆಹಲಿ : ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಇದುವರೆಗೂ ತನ್ನ ಬಳಿ 40 ಅಭ್ಯರ್ಥಿಗಳಿರುವುದಾಗಿ ಹೇಳಿದ್ದರು. ಆದ್ರೆ ಈಗಾ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ.

ಹೌದು ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಿಂಧೆ, ನನ್ನ ಬಳಿ 40 ಅಲ್ಲ 50 ಶಾಸಕರಿದ್ದಾರೆ ಎಂದಿದ್ದಾರೆ. ಶಿವಸೇನಾ ಪಕ್ಷದ 40 ಮತ್ತು ಇತರೆ 10 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎನ್ನುವ ಮೂಲಕ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ಹೊಸ ದಾಳ ಉರುಳಿಸಿದ್ದಾರೆ.

ಸದ್ಯ ಎಲ್ಲ ಶಾಸಕರೊಂದಿಗೆ ಶಿಂಧೆ ಅಸ್ಸಾಂ ರಾಜಧಾನಿ ಗುವಾಹಟಿಯ ಹೋಟೆಲ್ ಒಂದರಲ್ಲಿ ತಂಗಿದ್ದಾರೆ. ನಾವು ಬಾಳಾ ಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಮುನ್ನಡೆಸಿಕೊಂಡು ಹೋಗಬೇಕೆಂದುಕೊಂಡಿದ್ದೇವೆ. ಇದು ಯಾರಿಗೆ ಇಷ್ಟ ಇದೆಯೋ ಅವರು ನಮ್ಮ ಜೊತೆ ಬಂದು ಸೇರಬಹುದು ಎಂದು ಶಿಂಧೆ ಮುಕ್ತ ಆಹ್ವಾನವನ್ನು ನೀಡಿದರು.

ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ನೋಟಿಸ್ ಸಲ್ಲಿಸಲು ಮುಂದಾಗಿರುವ ಶಿವಸೇನೆಯ ಕ್ರಮವು “ಕಾನೂನುಬಾಹಿರ” ಎಂದು ಶಿಂಧೆ ಜರಿದಿದ್ದಾರೆ. ಉದ್ಧವ್ ಠಾಕ್ರೆ ಯಾರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದೀರಿ? ಕಾನೂನು ನಮಗೂ ತಿಳಿದಿದೆ. ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ವಿಪ್ ಸಭೆಗೆ ಅನ್ವಯಿಸುವುದಿಲ್ಲ ಎಂದು ಏಕನಾಥ್ ಶಿಂಧೆ ಟ್ವೀಟ್ ಮಾಡಿದ್ದಾರೆ. ಬುಧವಾರ ಉದ್ಧವ್ ಠಾಕ್ರೆ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ತೆರಳದ ಶಾಸಕರನ್ನು ಅನರ್ಹಗೊಳಿಸುವುದಾಗಿ ಶಿವಸೇನೆ ಬೆದರಿಕೆ ಹಾಕಿದ ಬೆನ್ನಲ್ಲೇ ಶಿಂಧೆ ಟ್ವೀಟ್ ಮಾಡಿದ್ದಾರೆ.