ಬಾಗಲಕೋಟೆ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ‘ಬರುತ್ತೆ.. ಸಿಡಿ ಬರುತ್ತೆ.. ವಿಧಾನಸಭೆ ಚುನಾವಣೆಯಲ್ಲಿ ಸಿಡಿ ಹೊರ ಬರುತ್ತೆ. 17ರಿಂದ 18 ಸಿಡಿಗಳು ಇವೆ. ಅವರೇ ಸ್ಟೇ ತಗೊಂಡಾರಲ್ಲ… ಅದರಲ್ಲಿ ಒಬ್ಬ ಗೋಪಾಲ ನಾನು ಏನೂ ತಗೊಂಡಿಲ್ಲ ಅಂದ. ಆದರೆ, ಅವರ ಹೈಟ್, ವೇಟ್​ಗೆ ಏನು ಮಾಡಾಕಾಗಲ್ಲ’ ಎಂದು ಇಬ್ರಾಹಿಂ ಲೇವಡಿ ಮಾಡಿದರು.

‘ಕರ್ನಾಟಕದಲ್ಲಿ ಆದಂತಹ ಬೆಳವಣಿಗೆ ಮಹಾರಾಷ್ಟ್ರದಲ್ಲೂ ನಡೆಯುತ್ತಿದೆ. ಇಲ್ಲಿನಂತೆಯೇ ಶಿವಸೇನೆ ಶಾಸಕರನ್ನು ತಗೊಂಡಿದ್ದಾರೆ. ಹಿಂದೆ ನಮ್ಮ ರಾಜ್ಯದ ಕೆಲ ಶಾಸಕರಿಗೆ 30 ಕೋಟಿ ರೂಪಾಯಿ, ಒಂದು ಮಂಚ ಕೊಟ್ಟಿದ್ರು. ಇವುಗಳ ಸಿಡಿ ಇವೆ. ಹೀಗಾಗಿ ಅವರೆಲ್ಲಾ ಸ್ಟೇ ತೆಗೆದುಕೊಂಡಿದ್ದಾರೆ. ಸಭಾಪತಿಗಳಿಗೆ ಸಿಡಿಯಲ್ಲಿ ಏನಿದೆ ನೋಡಿ ಸರ್ ಅಂದಿದ್ದೆ. ಸ್ಟೇ ಕೊಟ್ರಲ್ಲ, ಜಡ್ಜ್ ಅವರಾದ್ರೂ ನೋಡಬೇಕಲ್ಲ. ಕೇಂದ್ರದ ಮಾಜಿ ಸಚಿವ ಸದಾನಂದಗೌಡರು ಸ್ಟೇ ತಗೊಂಡಾರ. ರಾಜ್ಯದ 12 ಮಂತ್ರಿಗಳು ಸ್ಟೇ ತಗೊಂಡಾರ. ಆದರೂ ವಿಧಾನಸೌಧದಲ್ಲಿ ಬಹಳ ಗೌರವಾನ್ವಿತರಂತೆ ಮಾತಾಡ್ತಾರೆ. ಛೇ… ಛೇ…’ ಎಂದು ವ್ಯಂಗ್ಯವಾಡಿದರು.