ನವದೆಹಲಿ: ಲಂಚ ಪಡೆದು ನಿಯಮ ಮೀರಿ ಚೀನಾ ಪ್ರಜೆಗಳಿಗೆ ವೀಸಾ ಕೊಡಿಸಿದ ಆರೋಪದ ಮೇಲೆ ಸಂಸದ ಕಾರ್ತಿ ಚಿದಂಬರಂ ಆಪ್ತ ಎಸ್. ಭಾಸ್ಕರ ರಾಮನ್ ಅವರನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚೀನಾ ಪ್ರಜೆಗಳಿಂದ ಲಂಚ ಸ್ವೀಕರಿಸಿ ಅವರಿಗೆ ವೀಸಾ ಕೊಡಿಸಿದ ಆರೋಪ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಮಾಜಿ ಗೃಹ ಸಚಿವ ಪಿ. ಚಿದಂಬರಂ ಅವರ ಮನೆ ಸೇರಿದಂತೆ 10 ಸ್ಥಳಗಳಿಗೆ ದಾಳಿ ನಡೆಸಿ ಸಿಬಿಐ ಪರಿಶೀಲನೆ ನಡೆಸಿತ್ತು. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, ಭಾಸ್ಕರ ರಾಮನ್ ಮತ್ತು ಖಾಸಗಿ ಸಂಸ್ಥೆ ಸೇರಿದಂತೆ ಇತರರ ಮೇಲೆ ಆರೋಪ ಇರುವ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿತ್ತು. ಪ್ರಕರಣ ಸಂಬಂಧಪಟ್ಟಂತೆ ಇಂದು ಕಾರ್ತಿ ಚಿದಂಬರಂ ಆಪ್ತ ಎಸ್. ಭಾಸ್ಕರ ರಾಮನ್ ಬಂಧನವಾಗಿದೆ.

ಪಂಜಾಬ್‌ನ ಮಾನ್ಸಾ ಮೂಲದ ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ ಖಾಸಗಿ ಸಂಸ್ಥೆಯ ಯೋಜನೆಯನ್ನು ನಿಗದಿತ ಸಮಯದೊಳಗೆ ಮುಗಿಸುವ ಸಲುವಾಗಿ ಚೀನಾ ಪ್ರಜೆಗಳನ್ನು ಕರೆಸಿಕೊಳ್ಳಲು ನಿಯಮ ಮೀರಿ ವೀಸಾ ಕೊಡಿಸಲಾಗಿದೆ. ಇದಕ್ಕಾಗಿ ಸಂಸ್ಥೆಯು ಮಧ್ಯವರ್ತಿಗಳನ್ನು ಬಳಸಿಕೊಂಡಿದೆ. ಅಲ್ಲದೆ 50 ಲಕ್ಷ ರೂ. ಪಾವತಿಸಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಪಂಜಾಬ್ ಮೂಲದ ಖಾಸಗಿ ಸಂಸ್ಥೆಯು 1980 ಎಂಡಬ್ಲ್ಯೂ ಉಷ್ಣ ವಿದ್ಯುತ್ ಸ್ಥಾವರ ಕಾಮಗಾರಿಯನ್ನು ಚೀನಾದ ಕಂಪೆನಿಗೆ ಹೊರಗುತ್ತಿಗೆ ನೀಡಿದ್ದು, ನಿಗದಿತ ಅವಧಿಯೊಳಗೆ ಕೆಲಸ ಮುಗಿಸಲು ಚೀನೀ ವೃತ್ತಿಪರರನ್ನು ಕರೆಸಲು ಮುಂದಾಗಿತ್ತು. ಹೀಗಾಗಿ ಚೆನ್ನೈ ಮೂಲದ ವ್ಯಕ್ತಿಯೋರ್ವನನ್ನು ಸಂಪರ್ಕಿಸಿ ಹಿಂಬಾಗಿಲ ಮೂಲಕ ವೀಸಾ ಕೊಡಿಸುವ ಪ್ರಯತ್ನ ನಡೆಸಿದೆ.

ಮಾನ್ಸಾ ಮೂಲದ ಖಾಸಗಿ ಕಂಪನಿಯ ಪ್ರತಿನಿಧಿಯು ಕಂಪನಿಗೆ ಮಂಜೂರು ಮಾಡಿದ ಪ್ರಾಜೆಕ್ಟ್ ವೀಸಾಗಳನ್ನು ಮರುಬಳಕೆ ಮಾಡಲು 50 ಲಕ್ಷ ರೂ. ಲಂಚ ಪಾವತಿಸಿ ತಿಂಗಳೊಳಗೆ ಗೃಹ ಸಚಿವಾಲಯದಿಂದ ಅನುಮೋದನೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.