ಕೇಪ್‌ಟೌನ್: ಟೀಂ ಇಂಡಿಯಾ ಅನುಭವಿ ಬ್ಯಾಟರ್‌ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಕ್ರಿಕೆಟ್ ಭವಿಷ್ಯದ ಬಗ್ಗೆ ಹೇಳುವುದು, ನಿರ್ಧಾರ ಮಾಡುವುದು ನನ್ನ ಕೆಲಸವಲ್ಲ ಎಂದು ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ ತಂಡ 2-1 ರ ಅಂತರದಿಂದ ಕಳೆದುಕೊಂಡಿದೆ. ಕೇಪ್‌ಟೌನ್ ಟೆಸ್ಟ್ ಪಂದ್ಯವನ್ನು ಏಳು ವಿಕೆಟ್ ಗಳಿಂದ ಸೋತ ವಿರಾಟ್ ಪಡೆ, ಇತಿಹಾಸ ನಿರ್ಮಿಸುವ ಅವಕಾಶವನ್ನು ಕಳೆದುಕೊಂಡಿತು.

ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೊಹ್ಲಿ, “ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಕುರಿತು ನಾನು ಇಲ್ಲಿ ಕುಳಿತು ಮಾತನಾಡಲು ಸಾಧ್ಯವಿಲ್ಲ. ಆಯ್ಕೆದಾರರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ನೀವು ಅವರೊಂದಿಗೆ ಮಾತನಾಡಬೇಕು, ಅದು ನನ್ನ ಕೆಲಸವಲ್ಲ. ನಾನು ಮೊದಲೇ ಹೇಳಿದಂತೆ ಮತ್ತೊಮ್ಮೆ ಹೇಳುತ್ತೇನೆ. ಚೇತೇಶ್ವರ ಮತ್ತು ಅಜಿಂಕ್ಯಾ ರಹಾನೆ ಅವರು ಯಾವ ರೀತಿಯ ಆಟಗಾರರು ಮತ್ತು ಇಷ್ಟು ವರ್ಷಗಳಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಏನು ಮಾಡಿದ್ದಾರೆ ಎಂಬ ಕಾರಣಕ್ಕಾಗಿ ನಾವು ಅವರನ್ನು ಬೆಂಬಲಿಸುವುದನ್ನು ಮುಂದುವರಿಸಿದ್ದೇವೆ. ಅವರು ನಿರ್ಣಾಯಕ ಸಂದರ್ಭಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ನೀವೂ ನೋಡಿದ್ದೀರಿ. ಎರಡನೇ ಟೆಸ್ಟ್‌ನ ಮತ್ತು ಎರಡನೇ ಇನ್ನಿಂಗ್ಸ್‌ ನಲ್ಲಿನ ಅವರ ಪ್ರಮುಖ ಜೊತೆಯಾಟದಿಂದ ನಾವು ಉತ್ತಮ ರನ್ ಗಳಿಸಲು ಸಾಧ್ಯವಾಗಿತ್ತು” ಎಂದು ಹೇಳಿದ್ದಾರೆ.