ವಾರ್ಧಾ(ಮಹಾರಾಷ್ಟ್ರ): ಬಿಜೆಪಿ ಶಾಸಕನ ಪುತ್ರ ಸೇರಿದಂತೆ ಏಳು ಮಂದಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೋಮವಾರ ರಾತ್ರಿ 11:30ರ ಸುಮಾರಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರವು ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಹಾಗೂ ಅಪಘಾತದಲ್ಲಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಮೆಡಿಕಲ್​ ಕಾಲೇಜು ವಿದ್ಯಾರ್ಥಿಗಳು ಮಹಾರಾಷ್ಟ್ರದ ವಡೋದರಾದ ಸೆಲ್ಸುರಾ ಮೂಲಕ ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಇದ್ದಕ್ಕಿದ್ದಂತೆ ಕಾಡು ಪ್ರಾಣಿ ಕಾಣಿಸಿಕೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ಮಾಹಿತಿಯ ಪ್ರಕಾರ ಕಾಡು ಪ್ರಾಣಿಯನ್ನು ತಪ್ಪಿಸುವ ಸಲುವಾಗಿ ಕಾರಿನ ಚಕ್ರವನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಕಾರು ಕಂದಕದಲ್ಲಿ ಬಿದ್ದಿದೆ. ಪರಿಣಾಮ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವಾರ್ಧಾ ಎಸ್ಪಿ ಪ್ರಶಾಂತ್​ ಹೋಳ್ಕರ್​ ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ 7 ಮಂದಿ ಮೆಡಿಕಲ್​ ಕಾಲೇಜು ವಿದ್ಯಾರ್ಥಿಗಳಲ್ಲಿ ತಿರೋರಾ ಕ್ಷೇತ್ರದ ಶಾಸಕ ವಿಜಯ್​​ ರಹಗ್ದಲೆ ಪುತ್ರ ಆವಿಷ್ಕಾರ್​ ಕೂಡ ಇದ್ದಾನೆ ಎಂದು ತಿಳಿದು ಬಂದಿದೆ. ರಸ್ತೆ ಅಪಘಾತದಲ್ಲಿ ಮೃತರಾದ ಇತರೆ ವಿದ್ಯಾರ್ಥಿಗಳನ್ನು ನೀರಜ್​ ಚೌಹಾಣ್​, ನಿತೇಶ್​ ಸಿಂಗ್​, ವಿವೇಕ್ ನಂದನ್​, ಪ್ರತ್ಯುಷ್​​ ಸಿಂಗ್​, ಶುಭಂ ಜೈಸ್ವಾಲ್​ ಹಾಗೂ ಪವನ್​ ಶಕ್ತಿ ಎಂದು ಗುರುತಿಸಲಾಗಿದೆ.