ದುಬೈ: ಯುನೈಟಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ‘ಯುಎಇ ಟಿ20 ಲೀಗ್’ ಟೂರ್ನಿಗಾಗಿ ಭಾರತದ ಉದ್ಯಮಿ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತಂಡವೊಂದನ್ನು ಖರೀದಿಸಿರುವ ಬಗ್ಗೆ ವರದಿಯಾಗಿದೆ.

ಎಮಿರೆಟ್ಸ್ ಕ್ರಿಕೆಟ್ ಮಂಡಳಿ ಈ ಟಿ20 ಟೂರ್ನಿಯನ್ನು ನಡೆಸುತ್ತಿದ್ದು, ಈ ಟೂರ್ನಿಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಸಹಮಾಲೀಕತ್ವದ ರಿಲಯನ್ಸ್ ಸ್ಟ್ರಾಟೆಜಿಕ್ ಬಿಸಿನೆಸ್ ವೆಂಚರ್ಸ್ ಲಿಮಿಟೆಡ್(RSBL) ಹೊಸ ತಂಡವನ್ನು ಖರೀದಿಸಿ ಕ್ರಿಕೆಟ್‍ಗೆ ಮತ್ತಷ್ಟು ಒತ್ತುಕೊಡುತ್ತಿದೆ.

ಮೊದಲಬಾರಿಗೆ ಇತಿಹಾಸದಲ್ಲಿಯೇ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಈಗಾಗಲೇ ಭಾರತದ ಅತೀ ದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವವನ್ನು ನಿರ್ವಹಿಸುತ್ತಿದೆ. ಇದೀಗ ಯುಎಇ ಟಿ20 ಲೀಗ್‍ನಲ್ಲಿ ಇನ್ನೊಂದು ತಂಡವನ್ನು ಖರೀದಿಸುವ ಮೂಲಕ ಎರಡು ಕ್ರಿಕೆಟ್ ತಂಡದ ಮಾಲೀಕತ್ವವನ್ನು ಪಡೆದುಕೊಂಡಿದೆ, ಈ ಮೂಲಕ ಹೊರ ದೇಶಗಳಲ್ಲೂ ಕೂಡ ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡಲು ಮುಂದಾಗಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಅಂಬಾನಿ, ಮುಂಬೈ ಇಂಡಿಯನ್ಸ್ ಬಳಿಕ ಇದೀಗ ಇನ್ನೊಂದು ತಂಡವನ್ನು ಖರೀದಿಸಲು ಮುಂದಾಗಿದ್ದೇವೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಭಿಮಾನಿಗಳು ನೀಡಿರುವ ಪ್ರೋತ್ಸಾಹ ಇದಕ್ಕೆ ಮುಖ್ಯ ಕಾರಣ ಈ ಮೂಲಕ ಜಾಗತೀಕ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ವೃದ್ಧಿಸಲು ಸಜ್ಜಾಗಿದ್ದೇವೆ. ಈ ಬಾಂಧವ್ಯ ದೀರ್ಘ ಕಾಲದವರೆಗೆ ಮುಂದುವರಿಯಲಿದೆ ಎಂದಿದ್ದಾರೆ.

ವರ್ಷಕ್ಕೆ ಒಂದು ಬಾರಿ ನಡೆಯುವ ಯುಎಇ ಟಿ20 ಲೀಗ್ 6 ತಂಡಗಳನ್ನು ಹೊಂದಿದ್ದು, 34 ಪಂದ್ಯಗಳು ಈ ಟೂರ್ನಿಯಲ್ಲಿ ನಡೆಯಲಿದೆ. ಯುವ ಆಟಗಾರರಿಗೆ ಯುಎಇ ಲೀಗ್ ಮೂಲಕ ಕ್ರಿಕೆಟ್‍ಗೆ ಉತ್ತೇಜನ ನೀಡುತ್ತಿದೆ. ಈ ಬಾರಿಯ ಯುಎಇ ಲೀಗ್ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರ ಬರಬೇಕಾಗಿದೆ.