ಬೆಂಗಳೂರು: ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಕೊಲೆ ಸಂಚಿಗೆ ಸಂಬಂಧಿಸಿ ಆರೋಪಿ ಕುಳ್ಳ ದೇವರಾಜನನ್ನು ಬಂಧಿಸಲಾಗಿದ್ದು, ವಿಚಾರಣೆಗೆ ತನಿಖಾ ತಂಡ ರಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್‌ಪಿ ಕೋನ ವಂಶಿಕೃಷ್ಣ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ, ಕೊಲೆ ಸಂಚಿಗೆ ಸಂಬಂಧಿಸಿ ಶಾಸಕ ವಿಶ್ವನಾಥ್ ದೂರು ನೀಡಿದ್ದು, ಕೆಲವು ಸಾಕ್ಷಿಗಳನ್ನೂ ಶಾಸಕರು ಕೊಟ್ಟಿದ್ದಾರೆ. ಇದೀಗ ದೊಡ್ಡಬಳ್ಳಾಪುರ ಡಿವೈಎಸ್‌ಪಿ ನಾಗರಾಜ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ಕುಳ್ಳ ದೇವರಾಜ್ ನನ್ನು ಬಂಧಿಸಲಾಗಿದೆ ಎಂದರು.

ಆರೋಪಿಯ ಆರೋಗ್ಯ ತಪಾಸಣೆ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುವುದು. ವಿಶ್ವನಾಥ್ ವಿಚಾರಣೆಗೆ ಹಾಜರಾಗಿ ವೀಡಿಯೊವನ್ನು ಪೊಲೀಸ್ ವಶಕ್ಕೆ ನೀಡಿದ ನಂತರ, 32 ಜಿಬಿ ಪೆನ್ ಡ್ರೈವ್ ನಲ್ಲಿದ್ದ ವೀಡಿಯೊ ಪರಿಶೀಲನೆ ಮಾಡಲಾಗಿದೆ. ಆರೋಪಿ ಕುಳ್ಳ ದೇವರಾಜ್ ಮುಂದೆಯೇ ವೀಡಿಯೊ ಪ್ಲೇ ಮಾಡಿ ಹೇಳಿಕೆ ಪಡೆಯಲಾಗಿದೆ ಮತ್ತು ಈ ವಿಚಾರಣೆಯನ್ನು ವೀಡಿಯೊ ಸಹ ಮಾಡಲಾಗಿದೆ. ಕುಳ್ಳ ದೇವರಾಜ್ ಹೇಳಿಕೆಯ ಮೇಲೆ ನಾಳೆ ಗೋಪಾಲಕೃಷ್ಣರನ್ನು ವಿಚಾರಣೆಗೆ ಕರೆಯಲಾಗುವುದು ಎಂದರು.