ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ನ್ಯಾಯಾಧೀಶರನ್ನು ನೇಮಿಸಲಾಗಿದೆ. ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರು, ಸೋಮವಾರ ಉನ್ನತ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಕಳೆದ ಗುರುವಾರ, ಪಾಕಿಸ್ತಾನದ ನ್ಯಾಯಾಂಗ ಆಯೋಗವು (ಜೆಸಿಪಿ) ಮಲಿಕ್ ಅವರನ್ನು ನ್ಯಾಯಾಧೀಶರಾಗಿ ನೇಮಕ ಮಾಡಲು ಮತದಾನ ನಡೆಸಿತ್ತು. ಈ ವೇಳೆ ಆಯಿಷಾ ಅವರ ಪರವಾಗಿ ಐದರಲ್ಲಿ ನಾಲ್ಕು ಮತಗಳು ಬಿದ್ದಿದ್ದವು ಈ ಮೂಲಕ ಅವರು ನ್ಯಾಯಮೂರ್ತಿ ಹುದ್ದೆಗೆ ನಾಮ ನಿರ್ದೇಶನಗೊಂಡಿದ್ದರು. ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರು ಸುಪ್ರೀಂ ಕೋರ್ಟ್ ಕಟ್ಟಡದಲ್ಲಿ ನ್ಯಾಯಮೂರ್ತಿ ಮಲಿಕ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.