ಚಿಕ್ಕಬಳ್ಳಾಪುರ: ಮಳೆಗಾಲವಲ್ಲದಿದ್ದರು ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದೆ. ಈ ಮಳೆಯಿಂದಾಗಿ ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗರೆ ಕಾಲುವೆ ಗ್ರಾಮದಲ್ಲಿ ಕೋಳಿ ಫಾರಂಗೆ ಮಳೆ ನೀರು ನುಗ್ಗಿ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣ ಹೋಮ ಆಗಿದೆ.

ಗ್ರಾಮದ ಗುಣಭೂಷಣ್ ಅವರ ಕೋಳಿ ಫಾರಂ ಇದಾಗಿದ್ದು, ಸರಿಸುಮಾರು 50 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ರೈತ ಗುಣಭೂಷನ್ ತಿಳಿಸಿದ್ದಾರೆ. ಕಳೆದ ರಾತ್ರಿ ಸತತ 4-5 ಗಂಟೆಗಳ ಕಾಲ ಸುರಿದ ಮಳೆಗೆ, ರಾಜಕಾಲುವೆಯಲ್ಲಿ ಹರಿಯಬೇಕಾದ ನೀರು ಕೋಳಿ ಫಾರಂ ಶೆಡ್ ಗೆ ನುಗ್ಗಿದೆ. ಕೋಳಿ ಫಾರಂ ಶೆಡ್ ತುಂಬಾ 2-3 ಅಡಿ ನೀರು ಶೇಖರಣೆಗೊಂಡು ಕೋಳಿಗಳೆಲ್ಲವೂ ಸಾವನ್ನಪ್ಪಿವೆ.

ಸದ್ಯ ಮಾರುಕಟ್ಟೆಯಲ್ಲಿ 200 ರಿಂದ 250 ರೂಪಾಯಿಯವರೆಗೂ 1 ಕೆಜಿ ಚಿಕನ್ ಮಾರಾಟವಾಗುತ್ತಿದ್ದು, ಸರಿ ಸುಮಾರು 25 ಟನ್ ಗೆ 25 ರಿಂದ 30 ಲಕ್ಷ ಆದಾಯ ಕಣ್ಣು ಮುಂದೆಯೇ ನಾಶವಾಗಿದೆ. ಸರ್ಕಾರ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿಕೊಂಡಿದ್ದಾರೆ.