ಹಾಸನ: ಮಕ್ಕಳನ್ನು ಭಯೋತ್ಪಾದಕರ ಒಂದು ಗುಂಪನ್ನಾಗಿ ತಯಾರಿಸಲು ಹಿಂದೂ ಸಂಘಟನೆಗಳು ಯತ್ನಿಸುತ್ತಿವೆ. ದ್ವೇಷದ ಮನೋಭಾವವನ್ನು ಅವರ ಮನದಲ್ಲಿ ಬಿತ್ತಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಅರಕಲಗೂಡು ತಾಲೂಕು ಮಲ್ಲಿತಮ್ಮನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಮಕ್ಕಳಿಗೆ ಏರ್‌ಗನ್ ಶಸ್ತ್ರಾಭ್ಯಾಸ ಕೊಡಿಸಿರುವುದನ್ನು ಗಮನಿಸಿದರೆ ಸಮಾಜದ ಸಾಮರಸ್ಯ, ಐಕ್ಯತೆ ಹಾಳು ಮಾಡುವ ವಾತಾವರಣದಂತೆ ಇದು ಕಂಡು ಬರುತ್ತದೆ. ರಾಷ್ಟ್ರದ ಸಮಸ್ಯೆಗಳಿಗೆ ಪರಿಹಾರ ಶಾಂತಿಯ ಹೋರಾಟವೇ ಹೊರತು ಶಸ್ತ್ರಾಸ್ತ್ರ ಹಿಡಿಯುವುದಲ್ಲ ಎಂದರು.

ಪಠ್ಯದಲ್ಲಿ ಯಾವ ವಿಚಾರ ಸೇರ್ಪಡೆ ಮಾಡಿರೂ ಉತ್ತಮ ಶಿಕ್ಷಣ ನೀಡಿ. ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕೇ ಹೊರತು ವ್ಯಕ್ತಿಗಳ ಪಾಠ ಅಲ್ಲ. ಮನುಷ್ಯತ್ವ, ಹೃದಯ ವೈಶಾಲ್ಯತೆ, ಬದುಕುವ ಮಾರ್ಗದ ಬಗ್ಗೆ ಮಕ್ಕಳಿಗೆ ಕಲಿಸಿಕೊಡುವ ಅಗತ್ಯವಿದೆ ಎಂದವರು ಪಠ್ಯದಲ್ಲಿ ಹೆಡ್ಗೇವಾರ್‍ ವಿಷಯ ಸೇರ್ಪಡೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ದೇಶಪ್ರೇಮಿ, ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಭಗತ್‌ಸಿಂಗ್ ವಿಚಾರ ತೆಗೆದು ಹೆಡ್ಗೇವಾರ್ ವಿಷಯ ಸೇರಿಸಲು ಹೊರಟಿರುವುದು ಸರಿಯಲ್ಲ. ಇನ್ನು ಯಾವ್ಯಾವ ಅಜೆಂಡಾಗಳನ್ನು ಪುಸ್ತಕದಲ್ಲಿ ಅಳವಡಿಸಲಿದ್ದಾರೆ ಎಂದು ಪ್ರಶ್ನಿಸಿದರು.

ಬಸವರಾಜ ಹೊರಟ್ಟಿ ಅವರು ಜೆಡಿಎಸ್ ತೊರೆದರೂ ದೇವೇಗೌಡರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಆದರೆ ಮರಿತಿಬ್ಬೇಗೌಡರಿಗೆ ನಾವು ಯಾವುದೇ ಕಿರುಕುಳ ನೀಡಿಲ್ಲ. ಜೆಡಿಎಸ್ ತೊರೆಯುವಾಗ ಅದನ್ನು ಅವರು ನೆನಪು ಮಾಡಿಕೊಳ್ಳಬಹುದಿತ್ತು. ದಲಿತ ಸಮಾಜದ ನಾಯಕ, ವಾಸಯೋಗ್ಯ ಮನೆಯೂ ಇಲ್ಲದ ವ್ಯಕ್ತಿಯನ್ನು ಪಕ್ಷ ಶಾಸಕನಾಗುವ ಮಟ್ಟಿಗೆ ಬೆಳೆಸಿದೆ. ಅವರಿಂದ ಹಣ ಪಡೆದು ಆಯ್ಕೆ ಮಾಡಿಲ್ಲ. ಟಿಕೆಟ್ ನೀಡುವ ಸಂದರ್ಭ ಅವರು ದೇಣಿಗೆ ನೀಡಿರುವ ಕುರಿತು ಚರ್ಚೆ ಬೇಡ ಎಂದರು.