ಯಲ್ಲಾಪುರ: ಬೊಲೆರೊ ವಾಹನಕ್ಕೆ ಎಡದಿಂದ ಒಂದು ಲಾರಿ, ಬಲದಿಂದ ಮತ್ತೊಂದು ಟಿಪ್ಪರ್ ಡಿಕ್ಕಿ ಹೊಡೆದಿದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದು, 6 ಮಂದಿ ಗಂಭೀರ ಗಾಯಗಳಾದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಅರಬೈಲ್ ಘಟ್ಟದಲ್ಲಿ ನಡೆದಿದೆ.
ಬಾಗಲಕೋಟೆಯ ಲೋಕಾಪುರದ 8 ಜನರು ಬೊಲೆರೊದಲ್ಲಿ ಗೋಕರ್ಣ ಮತ್ತು ಧರ್ಮಸ್ಥಳಕ್ಕೆಂದು ಹೋಗುತ್ತಿದ್ದರು. ಈ ಪೈಕಿ ನಾಲ್ವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಹೊಸ ಬೊಲೆರೊ ಖರೀದಿಸಿದ್ದ ಕುಟುಂಬ ಕಾರಿಗೆ ಪೂಜೆ ಮಾಡಿಸಲೆಂದು ದೇವರ ಸನ್ನಿಧಿಗೆ ಹೋಗುತ್ತಿತ್ತು. ಮಾರ್ಗಮಧ್ಯೆ ಭೀಕರ ಅಪಘಾತವಾಗಿದ್ದು, ಕಾರಿನಲ್ಲಿದ್ದ ಭಾಗ್ಯಶ್ರೀ(35) ಮತ್ತು ಚಿಕ್ಕಮ್ಮ (28) ಮೃತಪಟ್ಟಿದ್ದಾರೆ.
ಬೊಲೆರೊದಲ್ಲಿದ್ದ ತಿಮ್ಮನ ಗೌಡ, ಹನುಮಂತ, ಲಕ್ಷ್ಮೀ, ಶೃತಿ, ಆಕಾಶ ಮತ್ತು ಅಪೇಕ್ಷಾ ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.