ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮುಖಕ್ಕೆ ಕಪ್ಪು ಮಸಿ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಹಾಗೂ ಪ್ರಕರಣವನ್ನು ಅವರು ಖಂಡಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಟಿಕಾಯತ್ ಮೇಲೆ ಹಲ್ಲೆ ವಿಚಾರ ಕುರಿತು ಮಾತನಾಡಿದ ಅವರು, ರೈತ ಮುಖಂಡನ ಮೇಲೆ ಪತ್ರಕರ್ತರ ಸೋಗಿನಲ್ಲಿ ಬಂದು ಮಸಿ ಹಾಕಿದ್ದಾರೆ. ಅವರು ಯಾವ ಪಕ್ಷದವರೆ ಆದರೂ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಇಂತಹ ಘಟನೆ ರಾಜ್ಯದಲ್ಲಿ ಆಗಬಾರದಿತ್ತು ಎಂದ ಗೃಹ ಸಚಿವರು, ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾವ ಪಕ್ಷದವರು ಕೂಡ ಇಂತಹ ಕೃತ್ಯ ಮಾಡಲು ಹೇಳಲ್ಲ. ಯಾರೆ ಆದ್ರೂ ಕೂಡ ಬಂಧನ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಇನ್ನು ಪಠ್ಯ ವಿಚಾರ ಮರೆಮಾಚಲು ಈ ಪ್ರಕರಣ ಅಂತ ಡಿಕೆಶಿ ಆರೋಪ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನೊಂದು ವರ್ಷದಲ್ಲಿ ಚುನಾವಣೆ ಬರ್ತಾ ಇದೆ. ಹಾಗಾಗಿ ಕಾಂಗ್ರೆಸ್ ಆರೋಪ ‌ಮಾಡ್ತಾ ಇದೆ. ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ. ಜನರು ಪಕ್ಷ ಬಿಟ್ಟು ಹೊಗ್ತಾ ಇದ್ದಾರೆ. ಡಿ ಕೆ ಶಿವಕುಮಾರ್ ಮಾತಿಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಎಂದರು.