ಚಿತ್ರದುರ್ಗ: ನಗರ ಪ್ರದೇಶದಲ್ಲಿ ತರಕಾರಿ, ಹಣ್ಣು, ಉಡುಪು ಸೇರಿದಂತೆ ವಿವಿಧ ಬಗೆಯ ಸರಕು ಸಾಮಗ್ರಿಗಳನ್ನು ಕೈಗೆಟಕುವ ದರದಲ್ಲಿ ನಗರ ನಿವಾಸಿಗಳ ಮನೆ ಬಾಗಿಲಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುವÀ ಬೀದಿ ಬದಿ ವ್ಯಾಪಾರಸ್ಥರ ಆರ್ಥಿಕ ಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ’ (PM SVANidhi) ಸಾಲ ಯೋಜನೆ ಜಾರಿಗೊಳಿಸಿದ್ದು, ಬಡ ವ್ಯಾಪಾರಿಗಳಿಗೆ ಯೋಜನೆಯಡಿ ಸಾಲ ಸೌಲಭ್ಯ ನೀಡುವಲ್ಲಿ ಬ್ಯಾಂಕ್‍ಗಳು ಅಸಡ್ಡೆತನ ತೋರುವಂತಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.
ಚಳ್ಳಕೆರೆಯ ರಮಾಬಾಯಿ ಕಲ್ಯಾಣ ಮಂಟಪದಲ್ಲಿ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗಾಗಿ ಏರ್ಪಡಿಸಲಾಗಿದ್ದ ಸಾಲ ಮೇಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರು ನಗರ ಪ್ರದೇಶದ ಅನೌಪಚಾರಿಕ ಆರ್ಥಿಕ ಹಾಗೂ ಸರಕು ಸಾಗಾಣಿಕೆಗಳನ್ನು ಕೈಗೆಟಕುವ ದರದಲ್ಲಿ ನಗರ ನಿವಾಸಿಗಳ ಮನೆ ಬಾಗಿಲಿಗೆ ತಲುಪಿಸಲು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇಂತಹ ವ್ಯಾಪಾರಿಗಳಿಗೆ ಆರ್ಥಿಕ ನೆರವು ಒದಗಿಸಿ ಸ್ವಾವಲಂಬಿಗಳನ್ನಾಗಿಸಲು ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಯೋಜನೆ ಜಾರಿಗೊಳಿಸಿದೆ. ನಗರ, ಸ್ಥಳೀಯ ಸಂಸ್ಥೆಗಳು ಬೀದಿ ಬದಿ ವ್ಯಾಪಾರಸ್ಥರನ್ನು ಸಮೀಕ್ಷೆ ಕೈಗೊಂಡು, ಗುರುತಿಸಿ, ಅವರಿಗೆ ಗುರುತಿನ ಪತ್ರವನ್ನು ವಿತರಿಸಿದೆ. ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಸಾಲ ನೀಡುವಂತಹ ಪಿಎಂ ಸ್ವನಿಧಿ ಯೋಜನೆ ಜಾರಿಯಲ್ಲಿ, ಬ್ಯಾಂಕ್‍ಗಳ ಸಹಕಾರ ಅತ್ಯಗತ್ಯವಾಗಿದ್ದು, ಸಾಲ ಮಂಜೂರಾತಿಗಾಗಿ ಶಿಫಾರಸುಗೊಂಡ ಫಲಾನುಭವಿಗಳಿಗೆ ಸಾಲ ವಿತರಣೆಯಲ್ಲಿ ಬ್ಯಾಂಕ್‍ಗಳು ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಸಾಲ ಸೌಲಭ್ಯ ದೊರಕಿಸುವ ಸಲುವಾಗಿ ಜಿಲ್ಲೆಯಾದ್ಯಂತ ಸಾಲ ಮೇಳ ಆಯೋಜಿಸಲಾಗುತ್ತಿದೆ. ಯೋಜನೆಯಡಿ ಜಿಲ್ಲೆಗೆ 3328 ಫಲಾನುಭವಿಗಳ ಗುರಿ ನಿಗಧಿಪಡಿಸಲಾಗಿದ್ದು, 5843 ಫಲಾನುಭವಿಗಳನ್ನು ಗುರುತಿಸಿ ಅರ್ಜಿ ಸಲ್ಲಿಸಲು ಎಲ್ಲಾ ನಗರಸ್ಥಳೀಯ ಸಂಸ್ಥೆಗಳು ಯಶಸ್ವಿಯಾಗಿವೆ. ಇದುವರೆಗೂ ಸಾಲ ಮಂಜೂರಾತಿಯಾದ 3909 ಜನರ ಪೈಕಿ 3253 ಜನರಿಗೆ ಬ್ಯಾಂಕ್‍ನಿಂದ ಸಾಲ ಬಿಡುಗಡೆಯಾಗಿದೆ. ಇನ್ನೂ 656 ಫಲಾನುಭವಿಗಳಿಗೆ ಸಾಲ ಮಂಜೂರಾತಿ ಆಗಿದ್ದರೂ ಬ್ಯಾಂಕ್‍ಗಳು ಸಾಲ ಬಿಡುಗಡೆ ಮಾಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬ್ಯಾಂಕ್‍ಗಳ ಈ ರೀತಿಯ ಧೋರಣೆಯನ್ನು ಸಹಿಸುವುದಿಲ್ಲ. ಸಂಬಂಧಪಟ್ಟ ಬ್ಯಾಂಕ್‍ಗಳು ಕೂಡಲೆ ಆಯಾ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡಬೇಕು. ಅಲ್ಲದೆ ಸಣ್ಣಪುಟ್ಟ ಕಾರಣಗಳನ್ನೊಡ್ಡಿ, 689 ಅರ್ಜಿಗಳನ್ನು ತಿರಸ್ಕರಿಸಿದ್ದು, ಇಂತಹ ಫಲಾನುಭವಿಗಳನ್ನು ಸಂಪರ್ಕಿಸಿ, ಈ ಅರ್ಜಿಗಳನ್ನೂ ಸಹ ಮರು ಪರಿಶೀಲಿಸಿ, ಸಾಲ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು, ಈ ಕುರಿತು ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಆಯಾ ಬ್ಯಾಂಕರ್‍ಗಳೊಂದಿಗೆ ಚರ್ಚಿಸಿ, ಎಲ್ಲ ಫಲಾನುಭವಿಗಳಿಗೂ ಸಾಲ ವಿತರಣೆ ಮಾಡಲು ಸಾಲ ವಿತರಣಾ ಮೇಳ ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.