ಬೆಂಗಳೂರು: ಧರ್ಮವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿ ಅದಕ್ಕೆ ಇರುವ ಪಾವಿತ್ರ್ಯವನ್ನು ಹಾಳುಗೆಡಹಿದ ಬಿಜೆಪಿ ಈಗ ಎಳೆಯ ಮಕ್ಕಳ ಬುದ್ದಿಕೆಡಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ರಾಜಕೀಯದ ಅಖಾಡ ಮಾಡಲು ಹೊರಟಿರುವುದು ಖಂಡನೀಯ. ನಾಡಿನ ಪ್ರಜ್ಞಾವಂತರೆಲ್ಲರೂ ಇದರ ವಿರುದ್ಧ ದನಿ ಎತ್ತಬೇಕಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ ಪಠ್ಯ ಪುಸ್ತಕಗಳಲ್ಲಿ ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೇವಾರ್‍ ಅವರ ಭಾಷಣ ಸೇರ್ಪಡೆ ವಿರೋಧಿಸಿ ಸರಣಿ ಟ್ವಿಟ್ ಮಾಡಿರುವಂತ ಅವರು, ರಾಜಕೀಯ ಪಕ್ಷಗಳಿಗೆ ತಮಗೆ ಸರಿಕಂಡ ವ್ಯಕ್ತಿಗಳನ್ನು ಆರಾಧಿಸುವ, ಅವರ ಚಿಂತನೆಗಳನ್ನು ಪ್ರಚಾರ ಮಾಡುವ ಅಧಿಕಾರವಿದೆ, ಆದರೆ ಶಿಕ್ಷಣ ಕ್ಷೇತ್ರವನ್ನು ಸ್ವಾರ್ಥ ರಾಜಕೀಯದ ರಾಡಿಯಿಂದ ಮಲಿನಗೊಳಿಸಬಾರದು. ಬುದ್ಧ, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಜಾತಿ, ಧರ್ಮ, ಪಕ್ಷ, ಪಂಥಗಳನ್ನು ಮೀರಿದ ಚೇತನಗಳು. ಇವರನ್ನು ಸ್ವಾರ್ಥ ರಾಜಕೀಯಕ್ಕೆ ದುರ್ಬಳಕೆ ಮಾಡಬಾರದು. ರಾಜಕೀಯ ದುರುದ್ದೇಶದಿಂದ ಮಾಡುವ ಈ ರೀತಿಯ ಅವಮಾನವನ್ನು ಸಹಿಸಲಾಗದು ಎಂದು ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.

ಹೆಡಗೆವಾರ್, ಗೋಲ್ವಾಲ್ಕರ್, ಗೋಡ್ಸೆ ಮೊದಲಾದವರನ್ನು ಬಿಜೆಪಿ ಕರ್ನಾಟಕ ತಮ್ಮ ಪಕ್ಷದ ವೇದಿಕೆಯಲ್ಲಿ ಮೆರೆದಾಡಿಸಲಿ, ಇವರ ಚಿತ್ರಗಳನ್ನೇ ಪ್ರದರ್ಶಿಸಿ ಚುನಾವಣೆಗಳಲ್ಲಿ ಮತಕೇಳಲಿ, ಪ್ರಜ್ಞಾವಂತ ಜನರು ತಪ್ಪು-ಸರಿಗಳನ್ನು ನಿರ್ಧರಿಸುತ್ತಾರೆ. ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಲಿಕೊಡಬೇಡಿ ಎಂದು ಹೇಳಿದ್ದಾರೆ.

ರಾಷ್ಟ್ರ, ಅಂತಾರಾಷ್ಟ್ರ ಗೌರವಕ್ಕೆ ಪಾತ್ರರಾಗಿರುವ ಸಾಹಿತಿ, ಚಿಂತಕರು, ಶಿಕ್ಷಣ ತಜ್ಞರು ರಾಜ್ಯದಲ್ಲಿದ್ದಾರೆ. ಆದರೆ ಇವರನ್ನು ಬಿಟ್ಟು ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ ಮಾಡಿಸಿರುವುದು ರಾಜ್ಯದ ಜನತೆಗೆ ಮಾಡಿರುವ ಅವಮಾನ. ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಕೇಳಿ ಬರುತ್ತಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯದ ಮುದ್ರಣವನ್ನು ತತ್‌ಕ್ಷಣ ತಡೆ ಹಿಡಿದು ರಾಜ್ಯದ ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಚಿಂತಕರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳೇ ನಿಜವೆಂದಾದರೆ ಇದು ಅಕ್ಷಮ್ಯ ಅಪರಾಧ. ಈ ಹಿನ್ನೆಲೆಯಲ್ಲಿ ಅನಗತ್ಯ ಊಹಾಪೋಹ ಮತ್ತು ಸಂಘರ್ಷಕ್ಕೆ ಅವಕಾಶ ನೀಡದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಖುದ್ದಾಗಿ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಾಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ ಎಂದು ಕಿಡಿ ಕಾರಿರುವ ಅವರು, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನೀಡಿರುವ ಕರಡನ್ನು ತತ್‌ಕ್ಷಣ ಹಿಂಪಡೆದು, ಸಮಿತಿಯನ್ನು ಬರ್ಖಾಸ್ತುಗೊಳಿಸಬೇಕು ಮತ್ತು ನಾಡಿನ ಚಿಂತಕರು ಮತ್ತು ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಿ ಹೊಸ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.