ಶ್ರೀನಗರ:  ಜಮ್ಮು-ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಸೇನಾಧಿಕಾರಿ ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಅಕ್ಟೋಬರ್‌ 10ರಂದು ರಾತ್ರಿ ಎನ್‌ಕೌಂಟರ್‌ ನಡೆದಿತ್ತು, ಅದೇ ಉಗ್ರರ ಗುಂಪು ಮತ್ತೆ ದಾಳಿ ನಡೆಸಿರುವುದಾಗಿ ವರದಿ ಹೇಳಿದೆ.

ಅ.10ರಂದು ನಡೆದ ದಾಳಿಯಲ್ಲಿ ಸೇನಾ ಅಧಿಕಾರಿ ಹಾಗೂ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಪೂಂಚ್‌ ಜಿಲ್ಲೆಯ ಮೆಂಧಾರ್‌‌ ಸಬ್‌ ಡಿವಿಷನ್‌ನ ನಾರ್‌ ಖಾಸ್‌‌ ಅರಣ್ಯ ಪ್ರದೇಶದಲ್ಲಿ ಉಗ್ರರ ವಿರುದ್ದ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಸೇನೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಉಗ್ರರ ಗುಂಪನ್ನು ಯೋಧರು ಕಳೆದ 4 ದಿನಗಳಿಂದ ಬೆನ್ನಟ್ಟಿದರೂ ಬೆಟ್ಟ ಹಾಗೂ ಅರಣ್ಯ ಪ್ರದೇಶಗಳಿಂದ ಆವೃತ್ತವಾಗಿದ್ದು, ಈ ಕಾರಣದಿಂದ ಉಗ್ರರ ಪತ್ತೆಗೆ ತೊಂದರೆಯಾಗುತ್ತಿರುವುದಾಗಿ ವರದಿ ತಿಳಿಸಿದೆ.

ಈ ನಡುವೆ, ಸೇನೆ ಹಾಗೂ ಉಗ್ರರು ಮುಖಾಮುಖಿಯಾದ ಸಂದರ್ಭ ಎನ್‌ಕೌಂಟರ್‌ ನಡೆದಿರುವುದಾಗಿ ವರದಿ ಹೇಳಿದೆ.