ವಾಷಿಂಗ್ಟನ್: ಅಮೆರಿಕದ ಗುಪ್ತಚರ ವಿಭಾಗವು ‘ವಾಷಿಂಗ್ಟನ್ ಪೋಸ್ಟ್’ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ಬಹಿರಂಗಪಡಿಸಿದ್ದು, ಈ ಕೊಲೆಯಲ್ಲಿ ತಮ್ಮ ಕೈವಾಡವನ್ನು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಒಪ್ಪಿಕೊಂಡಿದ್ದಾರೆ ಎಂದು ಮೊದಲ ಬಾರಿ ಸಾರ್ವಜನಿಕವಾಗಿ ಆರೋಪಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸೌದಿ ರಾಜ ಸಲ್ಮಾನ್ ಜತೆ ನಡೆಸಿದ ದೂರವಾಣಿ ಸಂಭಾಷಣೆಯ ವೇಳೆ ಈ ವರದಿ ಬಗ್ಗೆ ಪ್ರಸ್ತಾಪಿಸಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ವರದಿ ಬಹಿರಂಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ರಾಜ ಸಲ್ಮಾನ್ ಅವರ ಬದಲಾಗಿ ಆಡಳಿತ ನಿರ್ವಹಿಸುತ್ತಿರುವ ರಾಜಕುಮಾರ, ಟರ್ಕಿಯ ಇಸ್ತಾಂಬುಲ್‌ನಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಅವರನ್ನು ಹಿಡಿಯುವ ಅಥವಾ ಕೊಲ್ಲುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಅಮೆರಿಕದ ನಿವಾಸಿಯಾಗಿದ್ದ ಖಶೋಗ್ಗಿ, ವಾಷಿಂಗ್ಟನ್ ಪೋಸ್ಟ್‌ನಲ್ಲಿ ರಾಜಕುಮಾರ ಸಲ್ಮಾನ್ ಕುರಿತು ಕಟು ಟೀಕೆಯ ಬರಹಗಳನ್ನು ಬರೆದಿದ್ದರು. 2018ರ ಅಕ್ಟೋಬರ್‌ನಲ್ಲಿ ಅವರನ್ನು ಇಸ್ತಾಂಬುಲ್‌ನ ಸೌದಿ ರಾಯಭಾರ ಕಚೇರಿಗೆ ಕರೆದೊಯ್ದು ತುಂಡು ತುಂಡಾಗಿ ಕತ್ತರಿಸಿಕೊಲ್ಲಲಾಗಿತ್ತು.

ಖಶೋಗ್ಗಿ ಅವರ ಗೌರವಾರ್ಥ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಅವರು ‘ಖಶೋಗ್ಗಿ ಕಾನೂನು’ ಪ್ರಕಟಿಸಿದ್ದಾರೆ. ಸರ್ಕಾರದ ನೀತಿಗಳನ್ನು ವಿರೋಧಿಸುವವರನ್ನು ಬೆದರಿಸುವ ಅಥವಾ ಅವರ ಕುಟುಂಬದವರಿಗೆ ಕಿರುಕುಳ ನೀಡುವ ವಿದೇಶಿಗರಿಗೆ ಅಮೆರಿಕಕ್ಕೆ ಪ್ರವೇಶವನ್ನು ಈ ಕಾನೂನು ನಿಷೇಧಿಸುತ್ತದೆ. ಈ ಕಾನೂನು ಜಾರಿಗೆ ಬರುತ್ತಿದ್ದಂತೆಯೇ ಸೌದಿಯ 76 ಜನರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.