ನವದೆಹಲಿ: ಲೇಖಕರನ್ನು ಒಪ್ಪಲು ಸಾಧ್ಯವಿಲ್ಲದಿದ್ದರೆ ಅವರ ಪುಸ್ತಕವನ್ನು ಓದಬೇಡಿ. ಆದರೆ ಪುಸ್ತಕ ನಿಷೇಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಅರ್ಜಿ ವಜಾ ಮಾಡಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ‘ಸನ್‍ರೈಸ್ ಓವರ್ ಅಯೋಧ್ಯೆ’ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್, ಹಿಂದುತ್ವವನ್ನು ಐಸಿಸ್ ಮತ್ತು ಬೋಕೊ ಹರಾಮ್‍ಗೆ ಹೋಲಿಸಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಇದು ಸಾರ್ವಜನಿಕ ಶಾಂತಿಯನ್ನು ಉಲ್ಲಂಘಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ಚೌಧರಿ ಅರ್ಜಿ ಸಲ್ಲಿಸಿದ್ದರು.

ಪ್ರಖ್ಯಾತ ಗಾಯಕಿ ತಂದೆ ಶವ ರೈಲ್ವೆ ನಿಲ್ದಾಣ ಬಳಿ ಪತ್ತೆ!

ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಯಶವಂತ್ ವರ್ಮಾ ನೇತೃತ್ವದ ಏಕ ಸದಸ್ಯ ಪೀಠ ಪುಸ್ತಕವನ್ನು ನಿಷೇಧಿಸಲು ನಿರಾಕರಿಸಿತು. ವಿಚಾರಣೆ ವೇಳೆ, ‘ನೀವು ಲೇಖಕರನ್ನು ಒಪ್ಪದಿದ್ದರೆ, ಅದನ್ನು ಓದಬೇಡಿ. ಪುಸ್ತಕವು ಕೆಟ್ಟದಾಗಿ ಬರೆಯಲ್ಪಟ್ಟಿದೆ ಎಂದು ಜನರಿಗೆ ತಿಳಿಸಿ, ಉತ್ತಮವಾದದ್ದನ್ನು ಓದಿ’ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದರು.

ಇದೇ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ರಾಜ್ ಕಿಶೋರ್ ಚೌಧರಿ, ಪುಸ್ತಕವು ದೇಶಾದ್ಯಂತ ಕೋಮು ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಈ ಪುಸ್ತಕದಿಂದಾಗಿ ಈಗಾಗಲೇ ಹಿಂಸಾಚಾರದ ಘಟನೆಗಳು ನಡೆದಿವೆ. ಇಷ್ಟು ಮಾತ್ರವಲ್ಲದೇ ನೈನಿತಾಲ್‍ನಲ್ಲಿರುವ ಲೇಖಕರ ಮನೆಗೂ ಹಾನಿಯಾಗಿದೆ. ಯಾವುದೇ ಮಹತ್ವದ ಘಟನೆ ನಡೆದಿಲ್ಲವಾದರೂ ಅದು ಸಂಭವಿಸುವ ಸಾಧ್ಯತೆಯಿದೆ ಎಂದು ಕೋರ್ಟಿಗೆ ತಿಳಿಸಿದರು.

ಆರ್ಟಿಕಲ್ 19 ರ ಅಡಿಯಲ್ಲಿ ವಾಕ್ ಸ್ವಾತಂತ್ರ್ಯದ ಹಕ್ಕು ಸಂಪೂರ್ಣವಲ್ಲ, ಶಾಂತಿ ಭಂಗವನ್ನು ತಡೆಗಟ್ಟಲು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ವಿವಾದಿತ ಭಾಗವನ್ನು ತೆಗೆದುಹಾಕಬೇಕು ಈ ಸಂಬಂಧ ನೋಟಿಸ್ ನೀಡಬೇಕು ಎಂದು ಇದೇ ವೇಳೆ ಅವರು ಕೋರಿದರು.

ಇದಕ್ಕೆ ಉತ್ತರಿಸಿದ ಪೀಠ, ಪುಸ್ತಕಕ್ಕೆ ನಿರ್ಬಂಧವನ್ನು ಸರ್ಕಾರವೇ ಹಾಕಬೇಕು, ಆದರೆ ಈ ಪ್ರಕರಣದಲ್ಲಿ ಸರ್ಕಾರ ಏನನ್ನೂ ಮಾಡಿಲ್ಲ. ಹೀಗಾಗಿ ಕೋರ್ಟ್ ಕೂಡಾ ಪುಸ್ತಕ ನಿಷೇಧ ಸಾಧ್ಯವಿಲ್ಲ ಎಂದಿತು. ವಿವಾದಿತ ಭಾಗವನ್ನು ಓದಿ ಜನರು ನೋವು ಅನುಭವಿಸಿದರೆ ನ್ಯಾಯಾಲಯವು ಏನನ್ನೂ ಮಾಡಲು ಸಾಧ್ಯವಿಲ್ಲ. ಜನರು ಆ ಭಾಗವನ್ನು ಇಷ್ಟಪಡದಿದ್ದರೆ ಅವರು ಅಧ್ಯಾಯವನ್ನು ಬಿಟ್ಟುಬಿಡಬಹುದು ಎಂದು ಅಭಿಪ್ರಾಯಪಟ್ಟಿದೆ.