ಮುಂಬೈ: ತನ್ನ ಏಳನೇ ವಯಸ್ಸಿನಲ್ಲಿ ಶಾಲೆಯ ಸಮೀಪದಿಂದ ನಾಪತ್ತೆಯಾಗಿದ್ದ ಹುಡುಗಿಯೊಬ್ಬಳು 9 ವರ್ಷದ ಬಳಿಕ ಮತ್ತೆ ತನ್ನ ಕುಟುಂಬವನ್ನು ಸೇರಿರುವ ಘಟನೆ ಮುಂಬೈಯಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರಿ ಡಿಸೋಜಾ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತನಗೆ ಮಕ್ಕಳು ಇಲ್ಲದಿದ್ದಾಗ ಹುಡುಗಿಯನ್ನು ಅಪಹರಿಸಿದ್ದ ಹ್ಯಾರಿ, ತನಗೆ ಹೆಣ್ಣು ಮಗು ಜನಿಸಿದ ಬಳಿಕ ಸಂತ್ರಸ್ತ ಹುಡುಗಿಯನ್ನು ಬಲವಂತವಾಗಿ ಕೆಲಸಕ್ಕೆ ದೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಪೂಜಾ ಗೌಡ್​ ಎಂಬ ಹುಡುಗಿ 2013ರ ಜನವರಿ 22ರಂದು ಶಾಲೆಗೆ ಹೋದ ಪೂಜಾ ಮತ್ತೆ ಹಿಂದಿರುಗಲೇ ಇಲ್ಲ. ಆಗ ಆಕೆಗೆ 7 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಷ್ಟು ಹುಡುಕಾಡಿದರೂ ಯಾವುದೇ ಮಾಹಿತಿ ದೊರೆತಿರಲಿಲ್ಲ.

ಇನ್ನು ಮಹಿಳೆಯೊಬ್ಬರಿಂದ ಬಂದ ಸುಳಿವು ಪೂಜಾಳ ನಾಪತ್ತೆ ಪ್ರಕರಣಕ್ಕೆ ಮಹತ್ವದ ತಿರುವನ್ನೇ ನೀಡಿದ್ದು, ವಿಲೆ ಪಾರ್ಲೆದಲ್ಲಿರುವ ನೆಹರು ನಗರ ಕೊಳಗೇರಿಯಲ್ಲಿ ಒಂದು ಹದಿಹರೆಯದ ಹುಡುಗಿ ಮೇಲೆ ಅನುಮಾನವಿದೆ ಎಂದು ಮಹಿಳೆ ಸುಳಿವು ನೀಡಿದಳು. ಆಕೆಯ ಮನೆಗೆ ಒಂದು ಪೊಲೀಸ್​ ತಂಡವನ್ನು ಕಳುಹಿಸಿ, ವಿಚಾರಣೆ ನಡೆಸಿದ್ದಾರೆ.

ಈ ವೇಳೆ 16ನೇ ವಯಸ್ಸಿನಲ್ಲಿರುವ ಸಂತ್ರಸ್ತ ಪೂಜಾಳನ್ನು ವಿಚಾರಣೆ ನಡೆಸಿದಾಗ ಪೂಜಾ 9 ವರ್ಷಗಳ ಹಿಂದೆ ಶಾಲೆ ಸಮೀಪ ನಾಪತ್ತೆಯಾಗಿದ್ದ ಹುಡುಗಿ ಎಂಬುದು ಪೊಲೀಸರಿಗೆ ಖಚಿತವಾಗಿ ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ.