ನವದೆಹಲಿ: ಭಾರತದಲ್ಲಿ 2ರಿಂದ 18 ವರ್ಷದೊಳಗಿನವರಿಗೆ ನೀಡುವ ಕೊವ್ಯಾಕ್ಸಿನ್ ಲಸಿಕೆಗೆ ಮಂಗಳವಾರ ಡಿಸಿಜಿಐಗೆ ಸಿಡಿಎಸ್‌ಸಿಓನ ವಿಷಯ ತಜ್ಞರ ಸಮಿತಿಯು ತನ್ನ ಒಪ್ಪಿಗೆಯ ಶಿಫಾರಸು ನೀಡಿದೆ. ಈಗ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮಕ್ಕಳಿಗೆ ನೀಡುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡುವುದು ಮಾತ್ರ ಬಾಕಿ ಇದೆ. ಆದರೆ, ದೇಶದಲ್ಲಿ ಮಕ್ಕಳ ಕೊವ್ಯಾಕ್ಸಿನ್ ಲಸಿಕೆಯನ್ನು ನವೆಂಬರ್ ತಿಂಗಳ ಮಧ್ಯ ಭಾಗದಿಂದ ನೀಡುವ ಸಾಧ್ಯತೆ ಇದೆ. 18 ವರ್ಷದೊಳಗಿನವರ ಪೈಕಿ ಬೇರೆ ಬೇರೆ ರೋಗಗಳಿಂದ ಬಳಲುತ್ತಿರುವವರಿಗೆ ಮೊದಲಿಗೆ ಕೊವ್ಯಾಕ್ಸಿನ್ ಲಸಿಕೆ ಸಿಗಲಿದೆ.

ದೇಶದಲ್ಲಿ ಮಕ್ಕಳಿಗೆ ನೀಡುವ ಕೊರೊನಾ ಲಸಿಕೆಯಾದ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಸಿಡಿಎಸ್‌ಸಿಓನ ವಿಷಯ ತಜ್ಞರ ಸಮಿತಿಯು ತನ್ನ ಒಪ್ಪಿಗೆ ನೀಡಿ ಡಿಸಿಜಿಐಗೆ ಶಿಫಾರಸ್ಸು ಮಾಡಿದೆ. ಮಕ್ಕಳಿಗಾಗಿ ಕೋವಿಡ್ -19 ಲಸಿಕಾ ಅಭಿಯಾನವು ನವೆಂಬರ್ ದ್ವಿತೀಯಾರ್ಧದಲ್ಲಿ ಆರಂಭವಾಗುವ ಸಾಧ್ಯತೆಯಿದೆ. ದೇಶದ ಔಷಧ ನಿಯಂತ್ರಕದ ಅಡಿಯಲ್ಲಿರುವ ವಿಷಯ ತಜ್ಞರ ಸಮಿತಿಯು (ಎಸ್‌ಇಸಿ) ಮಂಗಳವಾರ 2 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಬಳಕೆಯನ್ನು ಅನುಮೋದಿಸಿತು. ಮಕ್ಕಳ ಕೊವ್ಯಾಕ್ಸಿನ್ ಲಸಿಕೆಯನ್ನು ಮೊದಲು ದೀರ್ಘಕಾಲದ ಅಥವಾ ತೀವ್ರವಾದ ಅನಾರೋಗ್ಯ ಪರಿಸ್ಥಿತಿಗಳಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾಗುತ್ತದೆ. ರೋಗಗಳಿಂದ ಬಳಲುತ್ತಿರುವ ಮಕ್ಕಳ ಆದ್ಯತೆಯ ಪಟ್ಟಿ ತಯಾರಾಗಲು ಮೂರು ವಾರಗಳವರೆಗೆ ತೆಗೆದುಕೊಳ್ಳಬಹುದು.

ಈಗ ವಿಷಯ ತಜ್ಞರ ಸಮಿತಿಯ ಶಿಫಾರಸನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಪರಿಶೀಲಿಸುತ್ತಿದೆ. ಒಮ್ಮೆ ಅನುಮೋದನೆ ಪಡೆದ ನಂತರ, ಮುಂದಿನ ತಿಂಗಳು ಲಸಿಕೆಯನ್ನು ಮಕ್ಕಳಿಗೆ ನೀಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. “ಡಿಸಿಜಿಐ ಲಸಿಕೆಯನ್ನು ಅನುಮೋದಿಸಿದ ನಂತರ, ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯೂನೈಸೇಶನ್ (ಎನ್‌ಟಿಎಜಿಐ) ಸದಸ್ಯರು ತಮ್ಮ ಅನುಮೋದನೆಗಾಗಿ ಸಲ್ಲಿಸಿದ ಮಧ್ಯಂತರ ಡೇಟಾವನ್ನು ಪರಿಶೀಲಿಸುತ್ತಾರೆ. ಭಾರತ್ ಬಯೋಟೆಕ್‌ನಿಂದ ಹೆಚ್ಚುವರಿ ವಿವರಗಳನ್ನು ಪಡೆಯಬಹುದು ”ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಪರಿಣಾಮಕಾರಿತ್ವ ಮತ್ತು ಸುರಕ್ಷತಾ ದತ್ತಾಂಶವನ್ನು ಆಧರಿಸಿ, NTAGI ಮಕ್ಕಳಲ್ಲಿ ವ್ಯಾಕ್ಸಿನೇಷನ್ ಪಡೆಯಲು ಆದ್ಯತೆಯ ಪಟ್ಟಿಯನ್ನು ಪೂರ್ಣಗೊಳಿಸುತ್ತದೆ. ಪಟ್ಟಿಯ ಅಂತಿಮಗೊಳಿಸುವಿಕೆಯು ಮೂರು ವಾರಗಳವರೆಗೆ ತೆಗೆದುಕೊಳ್ಳಬಹುದು. ಈ ಪಟ್ಟಿಯು ಲಸಿಕಾ ಅಭಿಯಾನದ ಬೆನ್ನೆಲುಬಾಗಿರುತ್ತದೆ ಮತ್ತು ಕಾಂಕ್ರೀಟ್ ಯೋಜನೆಗಳನ್ನು ರಚಿಸಲು ನಮಗೆ ಸಹಾಯ ಮಾಡುತ್ತದೆ. NTAGI ಸದಸ್ಯರು ಹೇಳುವ ಪ್ರಕಾರ, ಭಾರತ್ ಬಯೋಟೆಕ್ ತಕ್ಷಣದ ಬಿಡುಗಡೆಗೆ ಮತ್ತು ಮುಂದಿನ ಮೂರು ತಿಂಗಳವರೆಗೆ ಎಷ್ಟು ಡೋಸ್‌ಗಳನ್ನು ಒದಗಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. “ವಯಸ್ಕರು ಮತ್ತು ಮಕ್ಕಳಿಗಾಗಿ ಕೋವಾಕ್ಸಿನ್ ಹಂಚಿಕೆಗೆ ಸರಿಯಾದ ಸಮತೋಲನವನ್ನು ಮಾಡಿದ ನಂತರ, ನಾವು ನವೆಂಬರ್ ಮಧ್ಯ ಅಥವಾ ದ್ವಿತೀಯಾರ್ಧದಲ್ಲಿ ಮಕ್ಕಳಲ್ಲಿ ಲಸಿಕೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.” ಮಕ್ಕಳ ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ವಯಸ್ಕರಿಗೆ ಲಸಿಕೆಯ ವೇಗವನ್ನು ಎಲ್ಲಿಯೂ “ರಾಜಿ ಮಾಡಿಕೊಳ್ಳಬಾರದು” ಎಂಬುದು ಅವರ ಕಾಳಜಿಯಾಗಿದೆ ಎಂದು ಅವರು ಹೇಳಿದರು.

ವಿಯೆಟ್ನಾಂ: ದಂಪತಿ ಕೋವಿಡ್ ಪರೀಕ್ಷೆಗೆ ತೆರಳಿದ್ದಾಗ ಸಾಕಿದ್ದ 12 ನಾಯಿಮರಿಗಳನ್ನು ಕೊಂದ ಸ್ಥಳೀಯ ಅಧಿಕಾರಿಗಳು

ಜೈಡಸ್ ಹೆಲ್ತ್‌ಕೇರ್‌ನ ZyCoV-D ನಂತರ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮೋದನೆ ಪಡೆದ ನಂತರ ಈಗ ಮಕ್ಕಳಿಗೆ ಎರಡನೇ ಕೋವಿಡ್ -19 ಲಸಿಕೆಯಾಗಿ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ವಿಷಯ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದೆ. ಭಾರತ ಬಯೋಟೆಕ್ ಕಂಪನಿ ಪ್ರತಿ 15 ದಿನಗಳ ನಂತರ ಡೇಟಾವನ್ನು ಡಿಸಿಜಿಐಗೆ ಸಲ್ಲಿಸಬೇಕು. ಮೊದಲ ಮತ್ತು ಎರಡನೇ ಡೋಸ್ ನಡುವೆ 28 ದಿನಗಳ ಅಂತರವಿರುತ್ತೆ. ಮಕ್ಕಳಿಗೆ ಎರಡು ಡೋಸ್ ಕೋವಾಕ್ಸಿನ್ ಅನ್ನು ನೀಡಲಾಗುತ್ತದೆ. ಮಕ್ಕಳಿಗೆ 0.5 ಎಂಎಲ್ ಲಸಿಕೆಯನ್ನು ನೀಡಲಾಗುತ್ತದೆ. ವಯಸ್ಕರಿಗೆ ಒಂದು ವಯಲ್ ನಿಂದಲೇ 10 ರಿಂದ 20 ಜನರಿಗೆ ಲಸಿಕೆ ನೀಡಲಾಗುತ್ತೆ. ಆದರೇ, ಪ್ರತಿಯೊಂದು ಮಕ್ಕಳಿಗೆ ಪ್ರತೇಕ ಸೀರಂಜ್ ನಲ್ಲಿರುವ ಕೊವ್ಯಾಕ್ಸಿನ್ ಲಸಿಕೆಯನ್ನ ನೇರವಾಗಿ ನೀಡಲಾಗುತ್ತದೆ.

ಇನ್ನೂ ವಿಷಯ ತಜ್ಞರ ಸಮಿತಿಯು ಭಾರತ್ ಬಯೋಟೆಕ್ ಕಂಪನಿಗೆ ತನ್ನ ಅಧ್ಯಯನ, ಸಂಶೋಧನೆಯನ್ನ ಮುಂದುವರಿಸಲು ಸೂಚಿಸಿದೆ. ಲಸಿಕೆಯ ಸುರಕ್ಷತೆಯ ಡಾಟಾವನ್ನು ಸಲ್ಲಿಸುವಂತೆ ಸೂಚಿಸಿದೆ. ಜೊತೆಗೆ ಪ್ರತಿಕೂಲ ಪರಿಣಾಮದ ಸಂದರ್ಭಗಳ ಡಾಟಾವನ್ನು 2 ತಿಂಗಳವರೆಗೆ ಪ್ರತಿ 15 ದಿನಗಳಿಗೊಮ್ಮೆ ಸಲ್ಲಿಸಬೇಕು. ಬಳಿಕ ತಿಂಗಳಿಗೊಮ್ಮೆ ಸಲ್ಲಿಸಬೇಕು ಎಂದು ಭಾರತ್ ಬಯೋಟೆಕ್ ಕಂಪನಿಗೆ ವಿಷಯ ತಜ್ಞರ ಸಮಿತಿಯು ಸೂಚಿಸಿದೆ. ವಯಸ್ಕರ ಕೊವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದಿಸಿದಾಗಲೂ ಇದೇ ರೀತಿಯ ಷರತ್ತುಗಳನ್ನು ಹಾಕಲಾಗಿತ್ತು.

ಭಾರತ್ ಬಯೋಟೆಕ್ ಮಂಗಳವಾರ ಪ್ರತಿಕ್ರಿಯಿಸಿದ್ದು, ಕೋವಾಕ್ಸಿನ್‌ ಲಸಿಕೆಯ 2-18 ವರ್ಷಗಳ ವಯೋಮಾನದ ಕ್ಲಿನಿಕಲ್ ಪ್ರಯೋಗಗಳ ಡೇಟಾವನ್ನು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಗೆ ಸಲ್ಲಿಸಿದೆ ಎಂದು ಹೇಳಿದೆ. “ಇದು 2-18 ವಯಸ್ಸಿನವರಿಗೆ ಕೋವಿಡ್ -19 ಲಸಿಕೆಗಳಿಗಾಗಿ ವಿಶ್ವದಾದ್ಯಂತ ಅನುಮೋದನೆ ಪಡೆದ ಮೊದಲ ಲಸಿಕೆಯಾಗಿದೆ . ನಾವು ಈಗ ಸಿಡಿಎಸ್‌ಸಿಒನಿಂದ ಮತ್ತಷ್ಟು ನಿಯಂತ್ರಕ ಅನುಮೋದನೆಗಳಿಗಾಗಿ ಹಾಗೂ ಲಸಿಕೆ ಬಿಡುಗಡೆ ಮತ್ತು ಕೊವ್ಯಾಕ್ಸಿನ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಾಯುತ್ತಿದ್ದೇವೆ ಎಂದು ಭಾರತ್ ಬಯೋಟೆಕ್ ಕಂಪನಿಯು ಹೇಳಿದೆ.