ಚಿಕ್ಕಬಳ್ಳಾಪುರ:  ನನ್ನ ಹುಟ್ಟಿದ ದಿನ ನನ್ನ ಅವ್ವ, ಅಪ್ಪನಿಗೆ ಗೊತ್ತು. ಬಿಜೆಪಿಯವರಿಗೇನು ಗೊತ್ತು ಎಂದು ತಮ್ಮ ವಯಸ್ಸಿನ ಕುರಿತು ಆರೋಪ ಮಾಡಿದ್ದ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರಿಗೆ 75 ವರ್ಷ ಆಗಿಲ್ಲ, ರಾಜಕೀಯಕ್ಕೆ ಬೇಕಾಗಿ ಸಿದ್ದರಾಮೋತ್ಸವವನ್ನು ಆಚರಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಇದಕ್ಕೆ ಚಿಕ್ಕಬಳ್ಳಾಪುರದಲ್ಲಿಂದು ಪ್ರತಿಕ್ರಿಯಿಸಿದ ಅವರು, ಸಿದ್ದರಾಮೋತ್ಸವ ಯಶಸ್ಸಿನಿಂದ ಅವರಿಗೆ ಹೊಟ್ಟೆ ಉರಿ ಶುರುವಾಗಿದೆ. ಅದಕ್ಕಾಗಿ ತಮ್ಮ ವಯಸ್ಸಿನ ಕುರಿತು ಸುಳ್ಳು ಹಬ್ಬಿಸುತ್ತಿದ್ದಾರೆ. ಅವರಿಗೆ ಹೇಳಲು ಬೇರೆ ವಿಷಯವಿಲ್ಲ, ಅವರ ಮಾತಿಗೆ ಕಿಮ್ಮತ್ತೂ ಇಲ್ಲ ಎಂದರು.

ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಲವು ಉನ್ನತ ನಾಯಕರು ಪಾಲ್ಗೊಂಡಿದ್ದರು.