ಬೆಂಗಳೂರು: ದ್ವಿಚಕ್ರ ವಾಹನ ಸವಾರರು ಅರ್ಧ ಹೆಲ್ಮೆಟ್ ಗಳನ್ನು ಧರಿಸಿಕೊಂಡು ಸವಾರಿ ಮಾಡುತ್ತಿದ್ದಾರೆ. ಟೋಪಿ ಮಾದರಿಯ ಹೆಲ್ಮೆಟ್ ಗಳನ್ನು ಹೆಲ್ಮೆಟ್ ರಹಿತ ಚಾಲನೆ ಎಂದು ಪರಿಗಣಿಸಿ 500 ರೂ. ದಂಡ ವಿಧಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಅಥವಾ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರರ ಮೇಲೂ ಸಂಚಾರ ವಿಭಾಗದ ಪೊಲೀಸರು ದಂಡ ಪ್ರಯೋಗ ಶುರು ಮಾಡಿದ್ದು, ಈ ನಿಟ್ಟಿನಲ್ಲಿ ಕಳೆದ ಎರಡು ತಿಂಗಳಲ್ಲಿ ಹಾಫ್ ಹೆಲ್ಮೆಟ್ ಧರಿಸಿದವರೂ ಸೇರಿದಂತೆ ಹೆಲ್ಮೆಟ್ ಧರಿಸದ ಸವಾರರ ವಿರುದ್ಧ 13 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ಸಂಚಾರ ಪೊಲೀಸರು ಅರ್ಧ ಹೆಲ್ಮೆಟ್ ನ್ನು ಹೆಲ್ಮೆಟ್ ರಹಿತ ಚಾಲನೆ ಎಂದೇ ಪರಿಗಣಿಸಿ ದಂಡ ವಿಧಿಸುತ್ತಿದ್ದಾರೆ. ಮೋಟಾರು ವಾಹನ ನಿಯಮಗಳ 1989 ನಿಯಮ 230(1) ಕ್ಕೆ ತಿದ್ದುಪಡಿಯಲ್ಲಿ ರಾಜ್ಯವ್ಯಾಪಿ ಬೈಕ್ ಸವಾರ ಮತ್ತು ಹಿಂಬದಿ ಸವಾರರು ಐಎಸ್ ಐ ಮುದ್ರೆಯ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.