ಚೆನ್ನೈ: ದೇವಸ್ಥಾನಗಳ ಉಪದೇವಾಲಯಗಳನ್ನು ಜೀರ್ಣೋದ್ಧಾರ ಮಾಡೋದಾಗಿ ದೇಣಿಗೆ ಹಣ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಯೂಟ್ಯೂಬರ್‌ನನ್ನು ತಮಿಳುನಾಡು ಪೊಲಸರು ಬಂಧಿಸಿದ್ದಾರೆ.

ಪೆರಂಬಲೂರಿನ ಅರುಲ್ಮಿಗು ಮಧುರ ಕಾಳಿಯಮ್ಮನ್ ತಿರುಕೋಯಿಲ್‌ನ ಕಾರ್ಯನಿರ್ವಾಹಕ ಅಧಿಕಾರಿ ಟಿ.ಅರವಿಂದನ್ ಅವರ ದೂರಿನ ಆಧಾರದ ಮೇಲೆ ಕೇಂದ್ರ ಅಪರಾಧ ವಿಭಾಗದ (CCB) ಅವಡಿ ಪೊಲೀಸರು `ಇಳಯ ಭಾರತಂ’ ಯುಟ್ಯೂಬ್ ಚಾನೆಲ್‌ನ ಕಾರ್ತಿಕ್ ಗೋಪಿನಾಥ್‌ನನ್ನು ಇಂದು ಮಂಗಳವಾರ ಬಂಧಿಸಿದ್ದಾರೆ. ಈತ ದೇವಸ್ಥಾನಗಳ ಜೀರ್ಣೋದ್ಧಾರ ಹೆಸರಿನಲ್ಲಿ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಸಾರ್ವಜನಿಕರಿಗೆ ದೇಣಿಗೆ ನೀಡುವಂತೆ ಬೇಡಿಕೆ ಇಟ್ಟಿದ್ದ. ಮಧುರ ಕಾಳಿಯಮ್ಮನ್ ದೇವಸ್ಥಾನದ ಉಪದೇವಾಲಯಗಳ ಪ್ರತಿಮೆಗಳನ್ನು ನವೀಕರಿಸುವ ನೆಪದಲ್ಲಿ ಈತ ಪ್ರತ್ಯೇಕ ವೆಬ್‌ಸೈಟ್ ತೆರೆದು ಅಲ್ಲಿಂದಲೂ ದೇಣಿಗೆ ಸಂಗ್ರಹಿಸಿದ್ದ. ಈ ಮೂಲಕ ಬಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದ ಎನ್ನಲಾಗಿದೆ. ಸದ್ಯ ತಮಿಳು ನಾಡು ಪೊಲೀಸರು ಈತನ ಮೇಲೆ ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ಮತ್ತು ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.