“ತಾಯಿಯನ್ನು ನೋಡಿಕೊಳ್ಳಲು ದೊಡ್ಡ ಮನೆ ಅಗತ್ಯವಿಲ್ಲ, ದೊಡ್ಡ ಹೃದಯ ಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದ್ದಾಗಿ ಮಾದ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ, 89 ವರ್ಷದ ವೈದೇಹಿ ಸಿಂಗ್ ಅವರ ಪುತ್ರಿಯರಾದ ಪುಷ್ಪಾ ತಿವಾರಿ ಮತ್ತು ಗಾಯತ್ರಿ ಕುಮಾರ್ ಅವರು ತಮ್ಮ ಸಹೋದರ ತಾಯಿಯನ್ನು ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸಹೋದರಿಯರು ತಾಯಿಯ ಆಸ್ತಿಯನ್ನು ತಮ್ಮ ಸಹೋದರ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ತಾಯಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ತಾಯಿಯನ್ನು ನೋಡಿಕೊಳ್ಳಲು ನಮ್ಮ ಕಸ್ಟಡಿಗೆ ನೀಡಬೇಕು ಎಂದು ಕೋರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂರ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ, ಹೆಣ್ಣು ಮಕ್ಕಳು ತಮ್ಮ ತಾಯಿಯ ಜವಾಬ್ದಾರಿಯನ್ನು ಹೊರಬಹುದು ಎಂದು ಹೇಳಿದೆ. ಮಗ ತನ್ನ ತಾಯಿಯನ್ನು ಭೇಟಿ ಮಾಡಬಹುದು. ಈ ಕುರಿತು ಮಗನ ಪರವಾಗಿ ವಾದ ಮಂಡಿಸಿದ ವಕೀಲರು, ಪುಷ್ಪಾ ಹಾಗೂ ಗಾಯತ್ರಿ ಕುಟುಂಬ ಸಮೇತ ವಾಸವಿದ್ದು, ಹೆಣ್ಣು ಮಕ್ಕಳಿಗೆ ತಾಯಿ ಇರಿಸಿಕೊಳ್ಳಲು ಜಾಗವಿಲ್ಲ ಎಂದಿದ್ದರು. ಆಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು “ನೀವು ಎಷ್ಟು ದೊಡ್ಡ ಪ್ರದೇಶವನ್ನು ಹೊಂದಿದ್ದೀರಿ ಎಂಬುದು ಪ್ರಶ್ನೆಯಲ್ಲ, ನಿಮ್ಮ ತಾಯಿಯನ್ನು ನೋಡಿಕೊಳ್ಳಲು ನೀವು ಎಷ್ಟು ದೊಡ್ಡ ಹೃದಯವನ್ನು ಹೊಂದಿದ್ದೀರಿ ಎಂಬುವುದು ಮುಖ್ಯ” ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಮಹಿಳೆಯ ಯಾವುದೇ ಆಸ್ತಿಯನ್ನು ವರ್ಗಾವಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೆಣ್ಣು ಮಕ್ಕಳಿಗೆ ತಾಯಿಯ ಪಾಲನೆ ನೀಡುವ ವಿಚಾರವಾಗಿ ನ್ಯಾಯಾಲಯ ಮಗನ ಉತ್ತರ ಕೇಳಿದೆ.