ಹೈದರಾಬಾದ್​: ಮೂರು ಅಡಿ ಎತ್ತರವಿರುವ ಗಟ್ಟಿಪಲ್ಲಿ ಶಿವಲಾಲ್​ ಅವರು ಕುಬ್ಜ ಸಮುದಾಯದಲ್ಲೇ ಹೊಸ ಇತಿಹಾಸವೊಂದನ್ನು ಬರೆದಿದ್ದಾರೆ. ದೇಶದಲ್ಲಿ ಡ್ರೈವಿಂಗ್​ ಲೈಸೆನ್ಸ್​ ಪಡೆದ ಮೊದಲ ಕುಬ್ಜ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 42 ವರ್ಷದ ಶಿವಲಾಲ್​ ನಗರದ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಾನು ಕುಬ್ಜನಾಗಿರುವುದುರಿಂದ ಪ್ರಯಾಣ ಮಾಡುವುದು ತುಂಬಾ ಕಷ್ಟಕರವಾಗಿದ್ದರಿಂದ ಸ್ವಾವಲಂಬಿಯಾಗುವ ಅವಶ್ಯಕತೆ ಇತ್ತು. ಆದರೆ ಎತ್ತರ ಕಡಿಮೆ ಇರುವುದರಿಂದ ಡ್ರೈವ್​ ಮಾಡುವುದು ಕೂಡ ಕಷ್ಟಕರವಾಗಿತ್ತು. ಹೀಗಾಗಿ ಸಾರ್ವಜನಿಕ ಸಾರಿಗೆ ಮತ್ತು ಕ್ಯಾಬ್ಸ್​ ಮೇಲೆ ಶಿವಲಾಲ್​ ಅವಲಂಬಿತರಾಗಿದ್ದರು. ಆದರೆ, ಕೆಲವರು ಅವರ ಮೇಲೆ ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದರು ಎಂದು ಶಿವಲಾಲ್​ ತಮ್ಮ ನೋವನ್ನು ತೊಡಿಕೊಂಡಿದ್ದಾರೆ. ಹೀಗಾಗಿ ಒಂದು ನಿರ್ಧಾರಕ್ಕೆ ಬಂದ ಅವರು ಏನಾದರೂ ಕಾರು ಚಲಾಯಿಸುವುದನ್ನು ಕಲಿಯಲೇ ಬೇಕೆಂದುಕೊಂಡರು. ಶಿವಲಾಲ್​ಗೆ ನೆರವಾಗಿದ್ದು ಯೂಟ್ಯೂಬ್​ ವಿಡಿಯೋ. ಅಮೆರಿಕದಲ್ಲಿ ಕುಬ್ಜನೊಬ್ಬ ಕಾರು ಓಡಿಸುವುದನ್ನು ನೋಡಿದ ಶಿವಲಾಲ್​ಗೆ ಮತ್ತಷ್ಟು ನಂಬಿಕೆ ಬಂದಿತು. ಹೀಗಾಗಿ ಕಾರು ಓಡಿಸುವುದನ್ನು ಕಲಿಯಲು ಶಿವಲಾಲ್ ನೇರವಾಗಿ​ ಅಮೆರಿಕಕ್ಕೆ ಹಾರಿದರು. ಕೊನೆಗೆ ಕಾರು ಓಡಿಸುವುದು ಕಷ್ಟವಲ್ಲ ಎಂಬ ನಂಬಿಕೆಯೊಂದಿಗೆ ತಾಯ್ನಾಡಿಗೆ ಮರಳಿದ ಶಿವಲಾಲ್​, ಹೈದರಾಬಾದ್​ನಲ್ಲಿ ಕಾರು ವಿನ್ಯಾಸ ಮಾಡುವವರನ್ನು ಕಂಡುಕೊಂಡರು. ನನ್ನ ಕಾರಿನ ವಿನ್ಯಾಸವನ್ನು ಬದಲಾಯಿಸಿದೆ. ಕಾರಿನಲ್ಲಿರುವ ಪೆಡಲ್​ಗಳು ನನ್ನ ಎತ್ತರಕ್ಕೆ ಸರಿ ಹೊಂದುವಂತೆ ವಿನ್ಯಾಸಗೊಳಿಸಿಕೊಂಡಿದ್ದೇನೆ. ಆದರೆ, ನಾನು ಕಾರನ್ನು ಹೊಂದಿದ್ದರೂ ಸಹ, ನಗರದ 120ಕ್ಕೂ ಹೆಚ್ಚು ಡ್ರೈವಿಂಗ್ ಶಾಲೆಗಳು ವಿವಿಧ ಕಾರಣಗಳನ್ನು ಉಲ್ಲೇಖಿಸಿ ನನಗೆ ಕಲಿಸಲು ನಿರಾಕರಿಸಿದ್ದರಿಂದ ನನಗೆ ಡ್ರೈವಿಂಗ್ ಕಲಿಯುವುದು ತುಂಬಾ ಕಷ್ಟಕರವಾಯಿತು. ಆದರೆ, ಸ್ನೇಹಿತ ಇಸ್ಮಾಯಿಲ್ ಅವರ ಸಹಾಯದಿಂದ ಮಾತ್ರ ಅಸಾಧ್ಯ ಎಂಬುದನ್ನು ವಿಶ್ವ ದಾಖಲೆ ಮುರಿಯುವ ಪ್ರಯತ್ನವನ್ನಾಗಿ ಮಾಡಲು ಸಾಧ್ಯವಾಯಿತು ಎಂದು ಹೇಳಿದರು. ಶಿವಲಾಲ್​ ಸದ್ಯ ಕುಬ್ಜರ ಕೆಟಗರಿಯಲ್ಲಿ ಡ್ರೈವಿಂಗ್​ ಲೈಸೆನ್ಸ್​ ಪಡೆಯುವ ಮೂಲಕ ತೆಲುಗು ಬುಕ್​ ಆಫ್​ ರೆಕಾರ್ಡ್ಸ್​, ದಿ ಲಿಮ್ಕ ಬುಕ್​ ಆಫ್​ ರೆಕಾರ್ಡ್ಸ್​ ಮತ್ತು ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ ಮಾಡಿದ್ದಾರೆ. ಇದೀಗ ಶಿವಲಾಲ್​ ಅವರು ತನ್ನ ಪತ್ನಿಗೆ ಡ್ರೈವಿಂಗ್​ ಕಲಿಸುತ್ತಿದ್ದಾರೆ. ಅಲ್ಲದೆ, ನಗರದಲ್ಲಿ ವಿಶೇಷ ಡ್ರೈವಿಂಗ್​ ಸ್ಕೂಲ್​ ಅನ್ನು ತೆರೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಸರ್ಕಾರ ಸಾಲ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)