ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಜೂ.27ಕ್ಕೆ ಮುಂದೂಡಿದೆ.

ಸಂತ್ರಸ್ತ ಯುವತಿ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದಮಂಡನೆಗೆ ಸಮಯ ಕೋರಿಕೆ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ. ಯುವತಿ ಎಸ್ಐಟಿ ತನಿಖೆ ಪ್ರಶ್ನಿಸಿ ಸಲ್ಲಿಸಿರುವ ಮತ್ತು ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ನರೇಶ್ ಗೌಡ, ಶ್ರವಣ್ ವಿರುದ್ಧದ ಕೇಸ್ ರದ್ದು ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರೆಡೂ ಸೋಮವಾರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದವು. ಹೈಕೋರ್ಟ್ ಈ ಹಿಂದೆ, ಈಗಾಗಲೇ ಎಸ್ಐಟಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ, ಹಾಗಾಗಿ ಎಸ್ಐಟಿ ರಚನೆ ಕಾನೂನುಬದ್ದತೆ ಬಗ್ಗೆ ತೀರ್ಮಾನಿಸುವಂತೆ ಸೂಚಿಸಿತ್ತು. ಜೊತೆಗೆ ಸುಪ್ರೀಂಕೋರ್ಟ್, ಬಿ ರಿಪೋರ್ಟ್ ಆಧರಿಸಿ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ ಗೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.