ಬೆಂಗಳೂರು: ರಾಜ್ಯದ ಕಂದಾಯ ಇಲಾಖೆಯಲ್ಲಿ ಒಟ್ಟು 9,776 ಗ್ರಾಮ ಲೆಕ್ಕಾಧಿಕಾರಿಗಳಿದ್ದಾರೆ. ಇದರಲ್ಲಿ 1,660 ಹುದ್ದೆಗಳು ಖಾಲಿ ಇವೆ. ಕೋವಿಡ್ ಕಾರಣದಿಂದ ಹೊಸ ನೇಮಕಾತಿಗಳು ಆಗಿರಲಿಲ್ಲ. ಹಣಕಾಸು ಇಲಾಖೆ ಅನುಮತಿ ನೀಡಿದ ಕೂಡಲೇ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳನ್ನು ಮೆರಿಟ್ ಆಧಾರಿತವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್. ಅಶೋಕ್ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯನ್ನು ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವ ನಿಯಮಗಳು ಪ್ರಸ್ತುತ ಜಾರಿಯಲ್ಲಿವೆ.
ಇವುಗಳನ್ನು ಬದಲಾಯಿಸಿ ಲಿಖಿತ ಪರೀಕ್ಷೆ ನಡೆಸುವ ತೀರ್ಮಾನಗಳು ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಲೋಕಸೇವಾ ಆಯೋಗದ ಮೂಲಕ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಮಾದರಿಯಲ್ಲೇ ಗ್ರಾಮ ಲೆಕ್ಕಿಗರಿಗೂ ಲಿಖಿತ ಪರೀಕ್ಷೆ ನಡೆಸುವ ಆಲೋಚನೆ ಇಲ್ಲ. ನೇರ ನೇಮಕಾತಿ ಮಾಡುವ ತೀರ್ಮಾನವನ್ನು 2008-09 ರಲ್ಲೇ ಮಾಡಲಾಗಿದೆ ಎಂದು ಹೇಳಿದರು.