ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 5 ರಂದು, ಅಂದರೆ ಗೋವರ್ಧನ ಪೂಜೆ ಸಂದರ್ಭದಲ್ಲಿ ನಾಲ್ಕು ಧಾಮಗಳಲ್ಲಿ ಒಂದಾದ ಕೇದಾರನಾಥ ಪ್ರವಾಸದಲ್ಲಿದ್ದಾರೆ. ಬಳಿಕ ಆದಿಗುರು ಶಂಕರಾಚಾರ್ಯರ ಸುಂದರ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. ಪಿಎಂ ಮೋದಿ ಇಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಸೈನಿಕರೊಂದಿಗೆ ಮೋದಿ ದೀಪಾವಳಿ ಆಚರಿಸಿದ್ದಾರೆ ಎಂಬುವುದು ಉಲ್ಲೇಖನೀಯ.

ಇನ್ನು ಕೇದಾರನಾಥದಲ್ಲಿರುವ ಮೋದಿ ಇತ್ತೀಚೆಗೆ ನಿರ್ಮಿಸಲಾದ ಆದಿ ಗುರು ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಶಂಕರಾಚಾರ್ಯರ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿಲಿದ್ದಾರೆ. ಇಲ್ಲಿ ಅವರು ಭಾಷಣವನ್ನೂ ಮಾಡಲಿದ್ದಾರೆ. ಇದು ದೇಶದ 87 ಪ್ರಮುಖ ದೇವಾಲಯಗಳು ಮತ್ತು ಯಾತ್ರಾ ಸ್ಥಳಗಳಲ್ಲಿ ನೇರ ಪ್ರಸಾರವಾಗಲಿದೆ. ಈ ಎಲ್ಲಾ ದೇವಸ್ಥಾನಗಳಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿ ಅಥವಾ ರಾಜ್ಯಾಧ್ಯಕ್ಷರು ಇರಲಿದ್ದಾರೆ. ಇನ್ನು ಉತ್ತರಾಖಂಡ ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ (ನಿವೃತ್ತ) ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡಿದ್ದಾರೆ. ಇದಾದ ಬಳಿಕ ಮೋದಿ ಕೇದಾರನಾಥ ದೇಗುಲಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ, ಕೇದಾರ ದೇವರಿಗೆ ರುದ್ರಾಭಿಷೇಕ ನೆರವೇರಿಸಿದ್ದಾರೆ.

ಮಕ್ಕಳ ಕೋವ್ಯಾಕ್ಸಿನ್‌ ಲಸಿಕೆಗೂ ತ್ವರಿತ ಅನುಮೋದನೆ ಸಾಧ್ಯತೆ: ಸೌಮ್ಯ ಸ್ವಾಮಿನಾಥನ್‌

ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನ.5ರ ಶುಕ್ರವಾರ ಉದ್ಘಾಟಿಸಲಿರುವ ಆದಿಗುರು ಶಂಕರಾಚಾರ್ಯರ ಸುಂದರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌. ಸ್ವತಃ ಪ್ರಧಾನಿ ಕಾರ್ಯಾಲಯವೇ ದೇಶದೆಲ್ಲೆಡೆ ಶಿಲ್ಪಿಗಾಗಿ ಹುಡುಕಾಡಿ, ಕೊನೆಗೆ ಮೈಸೂರಿನ  ಕಲಾವಿದನಿಂದ ಈ ಪುತ್ಥಳಿಯನ್ನು ಕೆತ್ತಿಸಿದೆ. 2013ರಲ್ಲಿ ಉತ್ತರಾಖಂಡದಲ್ಲಿ ಭಾರಿ ಪ್ರವಾಹ ಉಂಟಾಗಿ ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ಸಮಾಧಿ ಕೊಚ್ಚಿಹೋಗಿತ್ತು. ನಂತರ ಅದರ ಮರುನಿರ್ಮಾಣದ ಭಾಗವಾಗಿ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರಗಳು ಜಂಟಿಯಾಗಿ ಕೇದಾರೇಶ್ವರ ದೇವಾಲಯದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಿವೆ.

ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ಆದಿಗುರು ಶಂಕರಾಚಾರ್ಯರ ಸಮಾಧಿಯನ್ನು ಕೇದಾರನಾಥ ಧಾಮದ ಪುನರ್ನಿರ್ಮಾಣ ಕಾರ್ಯಗಳ ಅಡಿಯಲ್ಲಿ ವಿಶೇಷ ವಿನ್ಯಾಸದೊಂದಿಗೆ ಸಿದ್ಧಪಡಿಸಲಾಗಿದೆ. ಆದಿಗುರು ಶಂಕರಾಚಾರ್ಯರ ಸಮಾಧಿಯನ್ನು ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಆರು ಮೀಟರ್ ಭೂಮಿಯನ್ನು ಅಗೆದು ನಿರ್ಮಿಸಲಾಗಿದೆ.

12 ಅಡಿ ಎತ್ತರ 35 ಟನ್‌ ತೂಕ

ಶಂಕರಾಚಾರ್ಯರ ಪುತ್ಥಳಿ 12 ಅಡಿ ಎತ್ತರವಿದ್ದು, ಕುಳಿತ ಭಂಗಿಯಲ್ಲಿದೆ. 35 ಟನ್‌ ತೂಕದ ಪುತ್ಥಳಿ ಕೆತ್ತಲು ಹೆಗ್ಗಡದೇವನಕೋಟೆಯಿಂದ ತರಲಾದ 120 ಟನ್‌ನ ಕೃಷ್ಣಶಿಲೆ ಬಳಸಲಾಗಿದೆ. . ಈ ಕಲ್ಲು ಮಳೆ, ಗಾಳಿ, ಬಿಸಿಲು ಹಾಗೂ ಕಠಿಣ ಹವಾಮಾನವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಪುತ್ಥಳಿಗೆ ಹೊಳಪು ಬರಲು ತೆಂಗಿನಕಾಯಿಯ ನೀರಿನಿಂದ ಪಾಲಿಶ್‌ ಮಾಡಲಾಗಿದೆ.

ಪ್ರಧಾನಿ ಕಚೇರಿಯಿಂದ ಆಯ್ಕೆ

ಮೈಸೂರಿನ ಯೋಗಿರಾಜ್‌ ಶಿಲ್ಪಿ ಅವರ ಕುಟುಂಬ ಐದು ತಲೆಮಾರಿನಿಂದ ಕಲ್ಲಿನ ಕೆತ್ತನೆಯಲ್ಲಿ ನೈಪುಣ್ಯ ಪಡೆದಿದೆ. ಯೋಗಿರಾಜ್‌ ಅವರು ತಮ್ಮ ಪುತ್ರ ಅರುಣ್‌ ಜೊತೆ ಸೇರಿ ಶಂಕರರ ಪುತ್ಥಳಿ ಕೆತ್ತಿದ್ದಾರೆ. ಸ್ವತಃ ಪ್ರಧಾನಿ ಸಚಿವಾಲಯದ ಅಧಿಕಾರಿಗಳೇ ದೇಶಾದ್ಯಂತ ಹುಡುಕಾಡಿ ಯೋಗಿರಾಜ್‌ ಅವರನ್ನು ಈ ಪುತ್ಥಳಿ ಕೆತ್ತಲು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದರು. 2020ರ ಸೆಪ್ಟೆಂಬರ್‌ನಲ್ಲಿ ಕೆತ್ತನೆ ಆರಂಭಿಸಿದ ಅವರು ಇತ್ತೀಚೆಗೆ ಪೂರ್ಣಗೊಳಿಸಿದ್ದರು.

ಮೈಸೂರಿನಿಂದ ಪುತ್ಥಳಿ ಸಾಗಿದ ಹಾದಿ

ಮೈಸೂರಿನಲ್ಲಿ 9 ತಿಂಗಳ ಶ್ರಮದ ಬಳಿಕ ಪುತ್ಥಳಿಯನ್ನು ಕೆತ್ತಲಾಗಿತ್ತು. ಬಳಿಕ ಮೈಸೂರಿನಿಂದ ಚಮೋಲಿ ಏರ್‌ಬೇಸ್‌ವರೆಗೆ ರಸ್ತೆಯ ಮೂಲಕ ಸಾಗಿಸಲಾಯಿತು. ಅಲ್ಲಿಂದ ಕೇದಾರನಾಥದಲ್ಲಿರುವ ಸಮಾಧಿ ಸ್ಥಳಕ್ಕೆ ಭಾರತೀಯ ವಾಯುಪಡೆ ವಿಮಾನದ ಮೂಲಕ ಸಾಗಿಸಲಾಗಿದೆ.

ಭಾರೀ ಭದ್ರತಾ ವ್ಯವಸ್ಥೆ

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸರು, ಪಿಎಸ್‌ಸಿ ಮತ್ತು ಇತರ ಭದ್ರತಾ ಪಡೆಗಳ ಸಿಬ್ಬಂದಿ ರುದ್ರ ಪಾಯಿಂಟ್‌ನಿಂದ ಕೇದಾರನಾಥ ದೇವಸ್ಥಾನ ಮತ್ತು ಧ್ಯಾನ್ ಗುಫಾ ಸೇರಿದಂತೆ ಗರುಡಚಟ್ಟಿಯವರೆಗೆ ಸಿದ್ಧರಾಗಿದ್ದಾರೆ. ಪ್ರತಿಯೊಂದು ಮೂಲೆಯನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಗೌರಿಕುಂಡ್‌ನಿಂದ ಕೇದಾರನಾಥದ ನಡುವಿನ ನಿಲುಗಡೆ ಮತ್ತು ಇತರ ಗುರುತಿಸಲಾದ ಸ್ಥಳಗಳಲ್ಲಿ ಪಡೆಗಳು ನೆಲೆಗೊಂಡಿವೆ. ಕೇದಾರನಾಥ ದೇವಸ್ಥಾನದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಚಾರ್ ಧಾಮ್‌ಗಳು, 12 ಜ್ಯೋತಿರ್ಲಿಂಗಗಳು ಮತ್ತು ಪ್ರಮುಖ ದೇವಾಲಯಗಳು, ಒಟ್ಟು 87 ದೇವಾಲಯಗಳಲ್ಲಿ ಸಾಧುಗಳು, ಭಕ್ತರು ಮತ್ತು ಸಾಮಾನ್ಯ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಮುಂದಿನ ವರ್ಷ ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಹೇಳೋಣ. ಮೋದಿಯವರ ಈ ಭೇಟಿಯೂ ಈ ದೃಷ್ಟಿಯಿಂದ ವಿಶೇಷ.