ಕೆಜಿಎಫ್ ಚಾಪ್ಟರ್-2 ಸಿನಿಮಾ ಸದ್ಯ ವಿಶ್ವಾದ್ಯಂತ ಭಾರಿ ಸುದ್ದಿ ಮಾಡಿದ ಕನ್ನಡದ ಹೆಮ್ಮೆಯ ಸಿನಿಮಾ. ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಮೂರನೇ ಹಾಗೂ ಕನ್ನಡದ ಮೊದಲ ಚಿತ್ರ. ರಿಲೀಸ್ ಆಗಿ ಒಂದು ತಿಂಗಳು ಕಳೆದರೂ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಕಲೆಕ್ಷನ್ ಇನ್ನೂ ನಿಂತಿಲ್ಲ. ರಾಕಿ ಬಾಯ್​ಗೆ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆ ಗಡಿ ಮೀರಿ ಸದ್ದು ಮಾಡುತ್ತಲೇ ಇದೆ.

ಕೆಜಿಎಫ್-2 ಚಿತ್ರದ ಕೊನೆಯಲ್ಲಿ 3ನೇ ಚಾಪ್ಟರ್ ಬರುವ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸುಳಿವು ನೀಡಿರುವುದು ಕೆಜಿಎಫ್​ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಕೆಜಿಎಫ್​-3 ಬಂದೇ ಬರುತ್ತೆ ಅಂತೆಲ್ಲಾ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಕೂಡ ಕೆಜಿಎಫ್ 2024ಕ್ಕೆ ತೆರೆ ಮೇಲೆ ಬರಲಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಂಗದೂರು ಸ್ಪಷ್ಟನೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.

ತ್ರಿಪುರಾದ 11ನೇ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಪದಗ್ರಹಣ

ಆದ್ರೆ, ಇದಕ್ಕೆಲ್ಲ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಬ್ರೇಕ್ ಹಾಕಿ, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ‘ಕೆಜಿಎಫ್-3 ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ನಮ್ಮ ಹೊಂಬಾಳೆ ಫಿಲ್ಮ್ಸ್ ಮುಂದೆ ಬಹಳಷ್ಟು ಅದ್ಭುತ ಸಿನಿಮಾಗಳಿವೆ. ಸದ್ಯದಲ್ಲಿ ಕೆಜಿಎಫ್-3 ಶುರು ಮಾಡುತ್ತಿಲ್ಲ. ಆದ್ರೆ ಮುಂದೆ ಮತ್ತೆ ಆ ಚಿತ್ರದ ಕೆಲಸ ಆರಂಭಿಸುವಾಗ ನಿಮಗೆ ತಿಳಿಸುತ್ತೇವೆ’ ಎಂದು ಟ್ವಿಟ್ ಮಾಡಿದ್ದಾರೆ.

ಕೆಜಿಎಫ್ 1, 2 ಚಾಪ್ಟರ್​ಗಳು ಭರ್ಜರಿ ಯಶಸ್ಸು ಗಳಿಸಿದ್ದರಿಂದ, 3ನೇ ಭಾಗಕ್ಕೂ ಭಾರಿ ಡಿಮ್ಯಾಂಡ್ ಕೇಳಿಬರುತ್ತಿದೆ. ಆದ್ರೆ ಪ್ರಶಾಂತ್ ನೀಲ್ ಮತ್ತು ಯಶ್ ಬಳಿ ಸದ್ಯ ಬೇರೆ ಪ್ರಾಜೆಕ್ಟ್​ಗಳು ಇರೋದ್ರಿಂದ ಕೆಜಿಎಫ್ 3 ತಡವಾಗಬಹುದು. ಪ್ರಶಾಂತ್ ನೀಲ್ ನಟ ಪ್ರಭಾಸ್​ಗೆ ಸಲಾರ್ ಚಿತ್ರ ನಿರ್ದೇಶಿಸುತ್ತಿದ್ದು, ನಂತರ ಜ್ಯೂ.ಎನ್​ಟಿಆರ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಗೆಯೇ ಯಶ್​ಗೆ ಮಫ್ತಿ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿಬರುತ್ತಿವೆ. ಈ ಎಲ್ಲ ಪ್ರಾಜೆಕ್ಟ್​ಗಳು ಮುಗಿದ ಮೇಲೆ ಕೆಜಿಎಫ್-3 ಬರಬಹುದು.