ಮುಂಬೈ: ಬಂಡಾಯ ಶಾಸಕರ ಗುಂಪಿನಿಂದ ತಪ್ಪಿಸಿಕೊಂಡು ಬಂದು ನನ್ನನ್ನು ಕಿಡ್ನಾಪ್‌ ಮಾಡಲಾಗಿದೆ ಎಂದು ಹೇಳಿದ್ದ ಶಾಸಕ ನಿತಿನ್ ದೇಶ್‌ಮುಖ್‌ಗೆ ಏಕನಾಥ ಶಿಂಧೆ ಗುಂಪಿನಲ್ಲಿರುವ ರೆಬೆಲ್ ಶಾಸಕರು ಇದೀಗ ತಿರುಗೇಟು ನೀಡಿದ್ದಾರೆ. ವಿಮಾನದಲ್ಲಿ ಬಂಡಾಯ ಶಾಸಕರ ಗುಂಪಿನೊಂದಿಗೆ ದೇಶ್‌ಮುಖ್‌ ಆರಾಮವಾಗಿ ಕುಳಿತಿರುವ ಫೋಟೋಗಳನ್ನು ಬಂಡಾಯ ಶಾಸಕರು ಬಿಡುಗಡೆ ಮಾಡಿದ್ದಾರೆ.

ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ವಿರುದ್ದ ಬಂಡಾಯವೆದ್ದು, ಸುಮಾರು 30ಕ್ಕೂ ಹೆಚ್ಚು ಶಾಸಕರನ್ನು ಕರೆದೊಯ್ದಿರುವ ಏಕನಾಥ್ ಶಿಂಧೆ ಅವರ ಗುಂಪಿನಿಂದ ಶಾಸಕರಾದ ನಿತಿನ್‌ ದೇಶ್‌ಮುಖ್‌ ಹಾಗೂ ಕೈಲಾಸ್​ ಪಾಟೀಲ್​ ತಪ್ಪಿಸಿಕೊಂಡು ಬಂದಿದ್ದರು. ಬಳಿಕ ಉದ್ದವ್ ಠಾಕ್ರೆ ಬಳಿ ತೆರಳಿ ತಾವು ಠಾಕ್ರೆ ಪರವಾಗಿಯೇ ಇರುತ್ತೇವೆ ಎಂದಿದ್ದರು. ತಮ್ಮನ್ನು ಕಿಡ್ನಾಪ್‌ ಮಾಡಲಾಗಿದ್ದು, ಶಿಂಧೆ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂಬುದಾಗಿ ದೇಶ್‌ಮುಖ್ ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಂಡಾಯ ಶಾಸಕರು, ಅವರೊಂದಿಗೆ ವಿಮಾನ ಹತ್ತುವಾಗ, ವಿಮಾನದಲ್ಲಿ ಕುಳಿತುಕೊಳ್ಳುವಾಗ ಆರಾಮವಾಗಿ ನಗುನಗುತ್ತಲೇ ಇರುವ ನಿತಿನ್ ದೇಶ್‌ಮುಖ್ ಅವರ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಫೋಟೋದಲ್ಲಿ ದೇಶ್‌ಮುಖ್‌ ಅವರು ಸ್ವಂತ ಆಸಕ್ತಿಯಿಂದಲೇ ಹೋಗುತ್ತಿರುವಂತೆ ಕಾಣುತ್ತಿದೆ.

ಫೋಟೊ ಬಿಡುಗಡೆಯಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ದೇಶ್‌ಮುಖ್‌, ಬಲವಂತವಾಗಿಯೇ ನನ್ನನ್ನು ಸೂರತ್‌ಗೆ ಕರೆದೊಯ್ದಿರುವುದು ನಿಜ. ನಾನು ತಪ್ಪಿಸಿಕೊಂಡು ಬರಲೆತ್ನಿಸಿದಾಗ ಸೂರತ್‌ ಪೊಲೀಸರು ನನ್ನನ್ನು ಹಿಡಿದುಕೊಂಡಿದ್ದರು ಎಂದಿದ್ದಾರೆ.