ಬೆಂಗಳೂರು: ಬಿಜೆಪಿಯ ಕೆಲ ನಾಯಕರು ಹಾಗೂ ಇತರೆ ಪಕ್ಷಗಳ ನಾಯಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಆದರೆ ಅವರ ಹೆಸರುಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ನಾವು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ. ವಿಧಾನ ಪರಿಷತ್ ಹಾಗೂ ಶಾಸಕರ ವಿಚಾರ ಚರ್ಚೆ ಮಾಡಲು ಆಗುವುದಿಲ್ಲ. ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಜತೆ ಮಾತನಾಡಿರುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಜತೆ ಯಾರೆಲ್ಲಾ ಮಾತನಾಡುತ್ತಿದ್ದಾರೆ ಎಂದು ಸಚಿವರನ್ನೇ ಕೇಳಿ. ಈ ಪ್ರಶ್ನೆಯನ್ನು ನನ್ನ ಬಳಿ ಕೇಳುವ ಬದಲು ಅವರನ್ನೇ ಕೇಳಿ. ನನ್ನ ಬಳಿ ಯಾರು ಮಾತನಾಡುತ್ತಾರೆ ಎಂಬ ಮಾಹಿತಿಯನ್ನು ನಾನ್ಯಾಕೆ ಬಿಟ್ಟು ಕೊಡಲಿ? ಇದರಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ಡಿಕೆಶಿ ಹೇಳಿದ್ದಾರೆ.