ನವದೆಹಲಿ: ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಟ್ವಿಟರ್‌ನಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ , “ನಾನು ಇಂದು ಧೈರ್ಯದಿಂದ ಕಾಂಗ್ರೆಸ್ ಪಕ್ಷದ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ನಿರ್ಧಾರವನ್ನು ನನ್ನ ಎಲ್ಲಾ ಸಹೋದ್ಯೋಗಿಗಳು ಮತ್ತು ಗುಜರಾತ್ ಜನರು ಸ್ವಾಗತಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ನನ್ನ ಈ ಹೆಜ್ಜೆಯ ನಂತರ, ಭವಿಷ್ಯದಲ್ಲಿ ಗುಜರಾತ್‌ಗಾಗಿ ನಾನು ನಿಜವಾಗಿಯೂ ಸಕಾರಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ” ಎಂದಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಹಾರ್ದಿಕ್ ಪಟೇಲ್ ರಾಜೀನಾಮೆ ಕಾಂಗ್ರೆಸ್‌ಗೆ ದೊಡ್ಡ ಹೊಡೆತವಾಗಿದೆ. “ಪಕ್ಷದವರೇ ನನ್ನನ್ನು ನಿರ್ಲಕ್ಷಿಸಿ, ಮೂಲೆಗುಂಪು ಮಾಡುತ್ತಿದ್ದಾರೆ” ಎಂದು ಬಹಿರಂಗವಾಗಿ ಈ ಹಿಂದೆ ಹಾರ್ದಿಕ್ ಪಟೇಲ್ ಟೀಕಿಸಿದ್ದರು.