ಮಧ್ಯಪ್ರದೇಶ: ಬಾಲಿವುಡ್ ನಟಿ ಕರೀನಾ ಕಪೂರ್, ಅದಿತಿ ಶಾ ಭೀಮ್ ಜ್ಞಾನಿ ಜೊತೆಯಾಗಿ ಬರೆದಿರುವ ‘ಕರೀನಾ ಕಪೂರ್ ಪೆಗ್ನೆನ್ಸಿ ಬೈಬಲ್’ ಪುಸ್ತಕ ವಿರೋಧಿಸಿ 2021ರಲ್ಲಿ ವಕೀಲ ಕ್ರಿಸ್ಟೋಫರ್ ಆಂಥೋನಿ ಮಧ್ಯಪ್ರದೇಶದ ಓಮತಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಈ ದೂರನ್ನು ಪೊಲೀಸರು ಸ್ವೀಕರಿಸದೇ ಇರುವ ಕಾರಣಕ್ಕಾಗಿ ಅವರು ಜಬಲ್ ಪುರದ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ದೂರು ನೀಡಿದ್ದರು. ಬೈಬಲ್ ಎನ್ನುವ ಪದವನ್ನು ಪ್ರೆಗ್ರೆನ್ಸಿಗೆ ಹೋಲಿಸಿರುವುದಕ್ಕೆ ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂದು ದೂರಿನಲ್ಲಿ ಬರೆದಿದ್ದರು.

ಜಬಲ್ ಪುರದ ಮ್ಯಾಜಿಸ್ಟ್ರೇಟ್ ದೂರನ್ನು ಪರಿಗಣಿಸಿ, ಮೇಲ್ನೋಟಕ್ಕೆ ಆಕ್ಷೇಪಾರ್ಹ ಸಂಗತಿಗಳು ಪುಸ್ತಕದಲ್ಲಿ ಕಂಡು ಬರುತ್ತಿಲ್ಲ ಎಂದು, ಯಾವ ರೀತಿಯಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ನೋವನ್ನುಂಟು ಮಾಡುತ್ತದೆ ಎಂದು ದೂರಿನಲ್ಲಿ ನಮೂದಿಸಿಲ್ಲ ಎಂದು ಅರ್ಜಿ ತಿರಸ್ಕರಿಸಿತ್ತು. ಆದರೂ, ಸುಮ್ಮನಿರದ ಆಂಥೋನಿ ಅವರು ಸೆಷನ್ಸ್ ಕೋರ್ಟ್ ಮೆಟ್ಟಿಲು ಏರಿದ್ದರೂ, ಅಲ್ಲಿಯೂ ಕೂಡ ಅರ್ಜಿ ವಜಾಗೊಂಡಿತ್ತು. ಹಾಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು.

ಆಂಥೋನಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ , ದೂರುದಾರ ರಾಜ್ಯ ಸರ್ಕಾರವನ್ನು ಕಕ್ಷಿದಾರನನ್ನಾಗಿ ಸೇರಿಸದೇ ಇರುವ ಕಾರಣಕ್ಕಾಗಿ, ರಾಜ್ಯ ಸರ್ಕಾರದ ಮೂಲಕ ಈ ಪ್ರಕರಣವನ್ನು ದಾಖಲಿಸಿ ಎಂದು ಆಂಥೋಣಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.