ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಆರ್.ಶೇಷಣ್ಣಕುಮಾರ್ ಗೆ ಮತ ನೀಡಿ: ಕುಂ.ವಿ ಮನವಿ.! - BC Suddi
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಆರ್.ಶೇಷಣ್ಣಕುಮಾರ್ ಗೆ ಮತ ನೀಡಿ: ಕುಂ.ವಿ ಮನವಿ.!

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಆರ್.ಶೇಷಣ್ಣಕುಮಾರ್ ಗೆ ಮತ ನೀಡಿ: ಕುಂ.ವಿ ಮನವಿ.!

ಚಿತ್ರದುರ್ಗ: ಖ್ಯಾತ ಸಾಹಿತಿಗಳು, ಪಂಪ ಪ್ರಶಸ್ತಿ ಪುರಸ್ಕೃತರು ಆದ ಕುಂ. ವೀರಭದ್ರಪ್ಪ ಅವರು ಚಿತ್ರದುರ್ಗ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆಗೆ ಸಂಬಂಧಸಿದಂತೆ ಒಬ್ಬ ಅಭ್ಯರ್ಥಿ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದ್ದರು. ಆದರೆ ಅವರು ಯಾರಿಗೆ ಮತ ಹಾಕಬೇಕೆಂದು ಈಗ ಮತದಾರರಲ್ಲಿ ಮನವಿಮಾಡಿಕೊಂಡಿದ್ದಾರೆ.

-ಸಂ

ಆತ್ಮೀಯ ಕನ್ನಡ ನುಡಿ, ಸಾಹಿತ್ಯ ಪ್ರೇಮಿಗಳೆ,

ಈ ಸಲ ಸ್ವಲ್ಪ ವಿಳಂಬವಾಗಿ ನಮ್ಮೆಲ್ಲರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಬಂದಿದೆ, ಅದೂ ಕೋವಿಡ್ ೨ ನೆ ಅಲೆ ತೀವ್ರತೆ ಪಡೆದಿರುವ ಕ್ಲಿಷ್ಟಕರ ಸಂದರ್ಭದಲ್ಲಿ. ಅಲ್ಲದೆ ಈ ಸಲದ ಚುನಾವಣೆ ಹಿಂದೆಂದಿಗಿಂತ ಹಲವು ಸವಾಲುಗಳನ್ನು ಒಳಗೊಂಡಿದೆ. ಕೆಲವು ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಮೊರೆ ಹೋಗಿದ್ದರೆ ಕೋಮುವಾದಿ ಪಕ್ಷವೊಂದು ಓರ್ವ ಅಭ್ಯರ್ಥಿಯನ್ನು ಬಹಿರಂಗವಾಗಿ ಬೆಂಬಲಿಸಿದೆ, ಕನ್ನಡದ ಅಸ್ಮಿತೆಗೆ ದಕ್ಕೆ ತರುವ ಅಂಶವೆಂದರೆ ಈ ಚುನಾವಣೆ ರಾಜಕಾರಣದ ಪರಿವೇಷ ಧರಿಸಿದೆ, ನಮ್ಮ ಕನ್ನಡ ನುಡಿ ಸೇವಕ, ಪರಿಚಾರಕ, ಫಲಾನುಭವಿ ಹಣ ರಾಜಕಾರಣದ ಆಮಿಷಕ್ಕೆ ಒಳಗಾಗಬಾರದು.

ಇತಿಹಾಸ ಪ್ರಸಿದ್ದ ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆ ನಾಡಿಗೆ ಹಲವು ಹೆಸರಾಂತ ಸಾಹಿತಿಗಳನ್ನು ನೀಡಿದೆ,  ಇಲ್ಲಿನ ಮತದಾರ ಕನ್ನಡ ತೆಲುಗು ಇವೆರಡೂ ಭಾಷೆಗಳ ಮಹಾಪೋಷಕ. ಈ ದ್ವಿಭಾಷಿಕ ಪ್ರಾಂತದಲ್ಲಿ ಕಸಾಪ ಚುನಾವಣೆ ನಡೆಯುತ್ತಿರುವುದು ಸಂಭ್ರಮದ ವಿಷಯ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳೆಲ್ಲರು ನಿಸ್ಸಂದೇಹವಾಗಿ ಕನ್ನಡ ಪ್ರೇಮಿಗಳೆ. ಇವರ ನಡುವೆ ಪುನಃ ಎರಡನೆ ಸಲ ಸ್ಪರ್ಧಿಸಿರುವ ಜಿಲ್ಲೆಯಾದ್ಯಂತ ಅದಮ್ಯ ಉತ್ಸಾಹದಿಂದ ಓಡಾಡುತ್ತಿರುವ ಕನ್ನಡಪರ ಕನಸುಗಾರ ಆರ್. ಶೇಷಣ್ಣಕುಮಾರ್ ನನ್ನ ಪ್ರಿಯ ಸಹೋದರ ಸದೃಶ ಮಿತ್ರ, ಕಳೆದ ಎರಡು ದಶಕಗಳಿಂದ ನಾನೀ ಪಾದರಸದಂಥ ಪಾರದರ್ಶಕ ವ್ಯಕ್ತಿತ್ವದ ಈ ಛಲದಂಕಮಲ್ಲನನ್ನು ತೀರಾ ಹತ್ತಿರದಿಂದ ಬಲ್ಲೆ, ಒಳ್ಳೆಯ ಸಂಘಟಕ , ಕವಿಹೃದಯಿ, ಸದಭಿರುಚಿ ವಾಚಕ, ಜನಾನುರಾಗಿ. ಕನ್ನಡ ನಾಡು ನುಡಿ ಸಂಬಂಧಿತ ಕನಸುಗಳನ್ನು ನನಸಾಗಿಸಲು ಈ ಸಲ ಸ್ಪರ್ಧಿಸಿದ್ದಾನೆ, ದಯವಿಟ್ಟು ಈ ಸಲ ಈತನಿಗೆ ನಿಮ್ಮ ಪವಿತ್ರ ಮತ ನೀಡಿ ಕನ್ನಡ ನುಡಿ ಚುಕ್ಕಾಣಿಯನ್ನು ಈ ಗೆಳೆಯನ ಕೈಗೆ ನೀಡಿ, ಇದು ನಿಮ್ಮೆಲ್ಲರ ಪ್ರೀತಿಯ ಫಲಾನುಭವಿಯಾದ ನನ್ನ ಮನವಿ.

– ಕುಂವೀ