ನವದೆಹಲಿ: ದುಬೈ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಹೊರಟಿದ್ದ ಎರಡು ವಿಮಾನಗಳು ಒಂದೇ ರನ್‌ ವೇ ನಲ್ಲಿ ಇದ್ದ ಕಾರಣ ಟೇಕ್‌ ಆಫ್‌ ವೇಳೆ ಯಾವುದೇ ದುರಂತ ಸಂಭವಿಸದೇ ನೂರಾರು ಪ್ರಾಣ ಉಳಿದಿರುವ ಘಟನೆ ನಡೆದಿದೆ.

ಇಕೆ-524 ವಿಮಾನ ದುಬೈನಿಂದ ಹೈದರಾಬಾದ್‌ಗೆ ರಾತ್ರಿ 9.45ರ ಸುಮಾರಿಗೆ ಟೇಕ್‌ ಆಫ್‌‌ಗೆ ಸಿದ್ದವಾಗಿತ್ತು. ಈ ವೇಳೆ ಇಕೆ-568 ವಿಮಾನವೂ ದುಬೈನಿಂದ ಬೆಂಗಳೂರಿಗೆ ಟೇಕ್‌ ಆಫ್‌ ಆಗಲು ತಯಾರಾಗಿತ್ತು. ಈ ಸಂದರ್ಭ ಟೇಕ್‌ ಆಫ್‌ ಆಗಬೇಕಾಗಿದ್ದ ಎರಡು ವಿಮಾನಗಳು ಒಂದೇ ರನ್‌‌ವೇನಲ್ಲಿ ಬಂದಿವೆ. ಅದೃಷ್ಟವಶಾತ್‌‌, ಯಾವುದೇ ದುರಂತ ಸಂಭವಿಸಿಲ್ಲ.

ಎಮಿರೇಟ್ಸ್ ಫ್ಲೈಟ್ ವೇಳಾಪಟ್ಟಿಯ ಪ್ರಕಾರ, ಎರಡೂ ವಿಮಾನಗಳ ನಿರ್ಗಮನ ಸಮಯದ ನಡುವೆ ಐದು ನಿಮಿಷಗಳ ಅಂತರವಿತ್ತು ಎನ್ನಲಾಗಿದೆ.

ಎರಡೂ ವಿಮಾನಗಳು ಒಂದೇ ರನ್‌ವೇನಲ್ಲಿ ಟೇಕ್‌ ಆಫ್‌ ಆಗುತ್ತಿರುವುದನ್ನು ಕಂಡ ಸಿಬ್ಬಂದಿ ಟೇಕ್‌ ಆಫ್‌ ಅನ್ನು ತಕ್ಷಣವೇ ತಿರಸ್ಕರಿಸಲು ಎಟಿಸಿಯಿಂದ ಸೂಚಿಲಾಯಿತು. ನಂತರ ಸುರಕ್ಷಿತವಾಗಿ ರನ್‌ವೇ ಅನ್ನು ತೆರವುಗೊಳಿಸಲಾಯಿತು.

ಸುರಕ್ಷತೆ ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿದೆ. ಘಟನೆಯ ಬಗ್ಗೆ ವಿಮಾನದ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಎಮಿರೇಟ್ಸ್‌ ವಕ್ತಾರರು ಹೇಳಿದ್ದಾರೆ.