ಬೆಂಗಳೂರು: ದಿವಂಗತ ಮಾದೇಗೌಡ ವಿರುದ್ಧದ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಅವರನ್ನು ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕಲಾಗುವುದು, ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ನೋಡಿದ್ದೇನೆ, ಶಿವರಾಮೇಗೌಡರ ದೂರವಾಣಿ ರೆಕಾರ್ಡ್ ವೈರಲ್ ಆಗಿದೆ. ಸಂಬಂಧ ಇಲ್ಲದೇ ಇರುವ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ದಿ.ಮಾದೇಗೌಡರ ಬಗ್ಗೆ ಮಾತನಾಡಿದ್ದಾರೆ. ಮಾದೇಗೌಡರು ಈಗ ಇಲ್ಲ. ಆದರೆ ಅವರ ಹೆಸರು ಯಾಕೆ ಎಳೆದು ತಂದರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ದಿವಂಗತ ಮಾದೇಗೌಡ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಸಂಬಂಧ ನಮ್ಮ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ. ನೋಟೀಸ್ ಕೊಟ್ಟು ಪಕ್ಷದಿಂದ ಹೊರ ಹಾಕಿ ಅಂತ ಸೂಚಿಸುತ್ತೇನೆ. ಅಂತವರು ಪಕ್ಷದಲ್ಲಿ ಇದ್ದರೆ ಶೋಭೆ ಇರುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

ಶಿವರಾಮೇಗೌಡ ಅವರೊಬ್ಬರೆ ಹಣವನ್ನು ಕಂಡಿರೋದಲ್ಲ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಣ ಖರ್ಚು ಮಾಡಿದ್ದನ್ನ ಹೇಳಿದ್ದಾರೆ. 30 ಕೋಟಿ ಖರ್ಚು ಮಾಡಿರುವುದನ್ನು ಹೇಳಿದ್ದಾರೆ. ಅದ್ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಗಡುಗಿದ್ದಾರೆ.