ನವದೆಹಲಿ: ಇನ್ಮುಂದೆ ಪ್ರತಿವರ್ಷ ಜನವರಿ 23ಕ್ಕೆ ಗಣರಾಜ್ಯೋತ್ಸವ ಆಚರಣೆ ಪ್ರಾರಂಭವಾಗಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಜಯಂತಿ ಸೇರಿಸಲು ಜ.24ರ ಬದಲು ಜ.23ರಿಂದ ಗಣರಾಜ್ಯೋತ್ಸವ ಆಚರಣೆ ಆರಂಭವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಹಿಂದೆ ಇದು ಜನವರಿ 24 ರಿಂದ ಪ್ರಾರಂಭವಾಗುತ್ತಿತ್ತು. ಗಣರಾಜ್ಯೋತ್ಸವದ ಆಚರಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನೂ ಸೇರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಸುಭಾಷ್ ಚಂದ್ರ ಬೋಸ್ 23 ಜನವರಿ, 1897ರಂದು ಜನಿಸಿದ್ದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಲು ಪ್ರಾರಂಭಿಸಿತು. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಆಚರಿಸಲು, ಸ್ಮರಿಸಲು ಮೋದಿ ಸರ್ಕಾರ ಗಮನ ಹರಿಸಿದೆ. ಇದರ ಭಾಗವಾಗಿ ಜನವರಿ 23ರಿಂದ ಗಣರಾಜ್ಯೋತ್ಸವ ಆಚರಣೆ ಪ್ರಾರಂಭವಾಗಲಿದೆ.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಇದುವರೆಗಿನ ತನ್ನ ಅಧಿಕಾರಾವಧಿಯಲ್ಲಿ ಹಲವು ಮಹತ್ವದ ದಿನಗಳನ್ನು ಪ್ರಕಟಿಸಿದೆ. ಅವುಗಳು ಈ ಕೆಳಗಿನಂತಿವೆ.

ಆಗಸ್ಟ್ 14: ವಿಭಜನೆಯ ಭಯಾನಕ ಸ್ಮಾರಕ ದಿನ
ಅಕ್ಟೋಬರ್ 31: ರಾಷ್ಟ್ರೀಯ ಏಕತಾ ದಿನ (ಸರ್ದಾರ್ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವ)
ನವೆಂಬರ್ 15: ಬುಡಕಟ್ಟು ಹೆಮ್ಮೆಯ ದಿನ (ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನ)
ನವೆಂಬರ್ 26: ಸಂವಿಧಾನ ದಿನ
ಡಿಸೆಂಬರ್ 26: ವೀರ್ ಬಾಲ್ ದಿವಸ್ (4 ಸಾಹಿಬ್ಜಾದಾಸ್‌ಗೆ ಗೌರವ)