ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್ ಐಸಿಯ) ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಇಂದಿನಿಂದ (ಮೇ 4 ರಿಂದ) ಚಂದಾದಾರಿಕೆಗೆ ತೆರೆಯಲ್ಪಡುತ್ತದೆ. ಆಫರ್ ಬೆಲೆ 902 ರೂ. ನಿಂದ 949 ರೂ. ಎಂದು ನಿಗದಿ ಪಡಿಸಲಾಗಿದೆ. ಮೇ 4ರಿಂದ 9ರವರೆಗೆ ಶೇ. 3.5 ಈಕ್ವಿಟಿಯೊಂದಿಗೆ ಚಂದಾದಾರಿಕೆ ಲಭ್ಯವಿದೆ. ಎಲ್ ಐಸಿಯ ಸುಮಾರು 22 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ 21,000 ಕೋಟಿ ರೂಪಾಯಿ($2.74 ಬಿಲಿಯನ್) ಗಳನ್ನು ಸಂಗ್ರಹಿಸಲು ಯೋಜಿಸಿದೆ. ಅಂದರೆ, ಸರ್ಕಾರವು ಎಲ್‌ಐಸಿಯ ಸುಮಾರು ಶೇಕಡ 3.5 ಪಾಲನ್ನು ಮಾರಾಟ ಮಾಡಲು ಮುಂದಾಗಿದೆ.

ಎಲ್‌ಐಸಿ ಐಪಿಒ ಮೇ 2ಕ್ಕೆ ಓಪನ್ ಆಗಿದ್ದು, ಇಂದಿನಿಂದ ಚಂದಾದಾರಿಕೆಗೆ ಪ್ರಾರಂಭವಾಗಲಿದೆ. ಮೇ 9ರವರೆಗೆ ಆಫರ್ ಇರಲಿದೆ. ಎಲ್‌ಐಸಿ ಉದ್ಯೋಗಿಗಳು ಮತ್ತು ರೀಟೇಲ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ 45 ರೂ.ನಂತೆ ರಿಯಾಯಿತಿ ಹಾಗೂ ಎಲ್‌ಐಸಿ ಪಾಲಿಸಿದಾರರಿಗೆ ಪ್ರತಿ ಷೇರಿಗೆ 60 ರೂ. ನಂತೆ ರಿಯಾಯಿತಿ ಇದೆ. ಎಲ್‌ಐಸಿ ಮಾರುಕಟ್ಟೆಯಲ್ಲಿ ಶೇಕಡ 66.2ರಷ್ಟು ದೈತ್ಯ ಪಾಲನ್ನು ಹೊಂದಿದೆ. ನೀವು ಈ ಐಪಿಒಗೆ ಅರ್ಜಿ ಸಲ್ಲಿಸಿದರೆ ದೇಶದ ದೊಡ್ಡ ಕಂಪನಿಯಲ್ಲಿ ಪಾಲುದಾರರಾಗುವ ಅವಕಾಶ ದೊರೆಯಲಿದೆ.

ನಿಮಗೆ ಎಲ್ಐಸಿ ಐಪಿಒ ಚಂದಾದಾರರು ಆಗಬೇಕೆಂದರೆ, ಎಸ್ ಬಿಐ ಯೋನೋ ಆಪ್ ಮೂಲಕ ಆಗಬಹುದು. ಯೋನೋ ಆಪ್ ನಲ್ಲಿ ಹೂಡಿಕೆದಾರರ ವಿಭಾಗಕ್ಕೆ ತೆರಳಿ IPO/ e-IPO ಆಯ್ಕೆ ಮಾಡಿಕೊಳ್ಳಿ. ಬ್ಯಾಂಕ್ ಖಾತೆ ವಿವರ, ಹೂಡಿಕೆ ಇನ್ನಿತರ ಅಗತ್ಯ ಮಾಹಿತಿಯನ್ನು ನೀಡಿ. ಖಾತೆ ಪರಿಶೀಲನೆ ಬಳಿಕ, ಹೂಡಿಕೆದಾರರು ‘Invest in IPO’ ವಿಭಾಗಕ್ಕೆ ತೆರಳಿ. ಅಲ್ಲಿ ಕೇಳುವ ಮಾಹಿತಿ ಅನುಸಾರ ನೀಡಿ ಮುಂದುವರಿಯಿರಿ.