ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ನಿಮಿತ್ತ ಅವರಿಗೆ ಗೌರವ ಸಲ್ಲಿಸಿದ್ದಾರೆ. ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಸ್ಪೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದ್ದಾರೆ.

ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ‘ಓರ್ವ ಮಾರ್ಗದರ್ಶಕ ಮತ್ತು ಬುದ್ಧಿಜೀವಿ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಸ್ಪೂರ್ತಿದಾಯಕವಾಗಿದೆ. ಅವರು ಶಿಕ್ಷಣ ಕ್ಷೇತ್ರದ ಬಗ್ಗೆ ಉತ್ಸುಕರಾಗಿದ್ದರು ಮತ್ತು ಸಮಾಜದಲ್ಲಿ ಸಹೋದರತ್ವದ ಭಾವನೆ ಹೆಚ್ಚಿಸಲು ಶ್ರಮಿಸಿದ್ದರು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಆಜಾದ್ ಜನ್ಮದಿನ: ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಆಜಾದ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ‘ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರು ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಜಿ ಅವರಿಗೆ ಅವರ ಜನ್ಮ ವಾರ್ಷಿಕೋತ್ಸವದಂದು ನಮನಗಳು. ರಾಷ್ಟ್ರೀಯ ಶಿಕ್ಷಣ ದಿನದ ಶುಭಾಶಯಗಳು’ ಎಂದು ಗಡ್ಕರಿ ಟ್ವೀಟ್ ಮಾಡಿ, ‘ರಾಷ್ಟ್ರೀಯ ಶಿಕ್ಷಣ ದಿನ’ ಎಂದು ಹ್ಯಾಶ್‌ಟ್ಯಾಗ್ ಹಾಕಿದ್ದಾರೆ.

ರಾಷ್ಟ್ರೀಯ ಶಿಕ್ಷಣ ದಿನ ಅಥವಾ ರಾಷ್ಟ್ರೀಯ ಶಿಕ್ಷಾ ದಿವಸ್ ಅನ್ನು ಪ್ರತಿ ವರ್ಷ ನ.11 ರಂದು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ.