bcsuddi.comಅದೊಂದು ಪುಟ್ಟ ಗ್ರಾಮ, ಎತ್ತ ನೋಡಿದರೂ ದೇವಾಲಯಗಳು, ಅಲ್ಲಲ್ಲಿ ಕೇಳಿಸುವ ವೇದ ಘೋಷಗಳ ಪಠಣ, ಪಕ್ಕದಲ್ಲೇ  ಝುಳ ಝುಳನೆ ಹರಿಯುವ ತುಂಗೆ, ಕಣ್ಣಿಗೆ ಹಬ್ಬವನ್ನುಂಟು ಮಾಡುವ ಬೆಟ್ಟ ಗುಡ್ಡಗಳ ಸಾಲು, ಮನಸ್ಸಿಗೆ ಮುದ ಕೊಡುವ ಹಸಿರ ಸಿರಿ ಹೊತ್ತಿರುವ ಮಲೆನಾಡಿನ ಒಂದು ಸುಂದರ ಗ್ರಾಮ ’ಮತ್ತೂರು’. ಇದು ಶಿವಮೊಗ್ಗ ಜಿಲ್ಲೆಯಲ್ಲಿದೆ. ಸಂಸ್ಕೃತ, ಸಂಗೀತ, ಸಾಹಿತ್ಯ, ಮತ್ತು ಗಮಕ ಕಲೆಗಳ ತವರೂರು. ಇಂಥ ಪರಿಸರದಲ್ಲಿ ಹುಟ್ಟಿದ ಚಂಪಕ ಅವರಿಗೆ ಸಂಗೀತ, ಗಮಕ ಕಲೆ ಪ್ರಕೃತಿದತ್ತವಾಗಿಯೇ ಒಲಿದು ಬಂದಿದೆ. ಇವರ ಸಾಧನೆಯ ಹಾದಿಯ ಕುರಿತ ಪಕ್ಷಿ ನೋಟ ಇಲ್ಲಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಗಮಕ ಕಲೆಗಳಲ್ಲಿ ಸಾಧನೆ ಮಾಡಿರುವ ಚಿತ್ರದುರ್ಗದ ವಿಧುಷಿ ಚಂಪಕ ಅವರಿಗೆ ಸಂಗೀತ ಬಾಲ್ಯದ ಬಳುವಳಿ. ಮನೆಯಲ್ಲಿ  ಓದು, ಸಂಗೀತ, ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ. ಇವರ ತಂದೆ ಗಮಕ ವಾಚಿಸುತ್ತಿದ್ದರು. ಮಗಳ ಮನದಾಸೆಗೆ ತಾಯ್ತಂದೆಯರು ನೀರೆರೆದರು.  ಚಂಪಕ ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ಸಂಗೀತಾಭ್ಯಾಸವನ್ನು ಗುರುಗಳಾದ ಶಂಕರ ನಾಯಕ್ ಅವರಲ್ಲಿ ಪ್ರಾರಂಭಿಸಿದರು. ಹೆಚ್ಚಿನ ವಿದ್ಯಾಭ್ಯಾಸವನ್ನು ಮತ್ತೂರು ಗೋಪಾಲ್ ಅವರಿಂದ ಕಲಿತರು. ಸಂಗೀತದ ಜೊತೆಗೆ ಮತ್ತೂರು ರಾಮಮೂರ್ತಿ ಹಾಗೂ ಗಮಕ ಗಂಧರ್ವ ಹೊಸಳ್ಳಿ ಕೇಶವಮೂರ್ತಿ ಅವರಲ್ಲಿ ಗಮಕವನ್ನು ಕಲಿತರು. ಸಂಗೀತದ ಮಜಲುಗಳನ್ನು ಅರಿಯಲು ಹಿಂದೂಸ್ಥಾನಿ ಸಂಗೀತವನ್ನು ಕಲಿತರು. ಪದವಿ ಗಳಿಸಿದ ನಂತರ ಶಿವಮೊಗ್ಗದ ಪ್ರತಿಭಾರಂಗದಲ್ಲಿ ಸಕ್ರಿಯಾರಾಗಿದ್ದರು. ಭದ್ರಾವತಿ ಆಕಾಶವಾಣಿಯಲ್ಲಿ ಗಮಕ ’ಬಿ’ ಗ್ರೇಡ್ ಹಾಗೂ ಲಘು ಸಂಗೀತದಲ್ಲಿ ’ಬಿ’ ಗ್ರೇಡ್ ಕಲಾವಿದೆಯಾಗಿ ಗುರುತಿಸಿಕೊಂಡರು.
ಮಲೆನಾಡಿನ ನಾದ ಗಂಗೆ ಬಯಲು ನಾಡಿಗೆ ಪಾದಾರ್ಪಣೆ:
ಚಂಪಕ ಅವರು ಚಿತ್ರದುರ್ಗದ ಪ್ರೊಫೆಸರ್ ಶ್ರೀಧರ್ ಅವರನ್ನು ವಿವಾಹವಾಗಿ ಹೆಮ್ಮೆಯ ಕೋಟೆ ನಾಡಿಗೆ ಕಾಲಿಟ್ಟರು. ಗಾಯನವೇ ’ಜೀವ ಮತ್ತು ಜೀವನ’ವೆಂದು ನಂಬಿದ್ದ ಪತ್ನಿಗೆ ಕಲಾರಾಧನೆ ಮಾಡಲು ಸಂಪೂರ್ಣ ಸಹಕಾರ ನೀಡಿದರು. ಚಿತ್ರದುರ್ಗದಲ್ಲಿ ನಡೆದ ಜಿಲ್ಲಾ ಗಮಕ ಸಮ್ಮೇಳನದಲ್ಲಿ ಚಂಪಕ ಅವರ ಕಲೆಯನ್ನು ಅಭಿವ್ಯಕ್ತಪಡಿಸಲು ರಾಜಾರಾಮ ಮೂರ್ತಿ ಹಾಗೂ ಶೇಷಾಚಲಯ್ಯನವರು ಕಾರಣೀಭೂತರಾದರು. ಈ ಸದಾವಕಾಶದಿಂದಾಗಿ ಕೋಟೆ ನಾಡಿನ ಜನತೆಗೆ ಚಂಪಕ ಶ್ರೀಧರ್ ಅವರ ಕಲೆಯ ಪರಿಚಯವಾಯಿತು, ಇವರ ಸುಮಧುರ ಗಾಯನ ಹಾಗೂ ಪಕ್ವವಾದ ಗಮಕ ವಾಚನವನ್ನು ದುರ್ಗದ ಜನತೆ ಒಪ್ಪಿಕೊಂಡಿತು.  ಅದೃಷ್ಟವೇನೋ ಎನ್ನುವಂತೆ ಇವರ ಕಲಾ ಸೇವೆಗೆ ಹೊಸ ಮುನ್ನುಡಿ ಪ್ರಾರಂಭವಾಯಿತು. ಚಿತ್ರದುರ್ಗದ ಜನತೆ ಇವರಲ್ಲಿ ಸಂಗೀತ, ಗಮಕ  ಕಲಿಯಲು ಮುಂದಾದರು.  ಇದರೊಂದಿಗೆ ಹೆಮ್ಮೆಯ ಚಿತ್ರದುರ್ಗ ಆಕಾಶವಾಣಿಯಿಂದಲೂ ಪ್ರೋತ್ಸಾಹ ಸಿಕ್ಕಿತು.
ಸ್ವರಾತ್ಮಿಕ ಶಾಲೆಯಲ್ಲಿ:
ಸುಮಾರು ಹದಿನೈದು ವರ್ಷಗಳ ಹಿಂದೆ ಪ್ರಾರಂಭವಾದ ’ಸ್ವರಾತ್ಮಿಕ ಸಂಗೀತ ಶಾಲೆ’ ಯ ಆರಂಭದ ದಿನಗಳಲ್ಲಿ ಸಂಗೀತ ಕಲಿಯಲು ಕೇವಲ ಬೆರಳಣಿಕೆಯಷ್ಟು ಮಂದಿ ಬರುತ್ತಿದ್ದರು. ಇವರ ನಿರಂತರ ಶ್ರಮ, ಸಾಧನೆ,  ಶ್ರದ್ಧೆ ಮತ್ತು ಪಾಠ ಹೇಳಿಕೊಡುವ ರೀತಿಯಿಂದಾಗಿ ಕ್ರಮೇಣ ಸಾಕಷ್ಟು ಮಂದಿ ಕಲಿಯಲು ಮುಂದಾದರು. ಇಂದು ನೂರಾರು ಶಿಷ್ಯರನ್ನು ಹೊಂದಿದ್ದಾರೆ. ಆರರಿಂದ ಅರವತ್ತು ವರ್ಷದ ಪ್ರಾಯದವರು ಆಸಕ್ತಿಯಿಂದ ಸಂಗೀತ ಕಲಿಯುತ್ತಿದ್ದಾರೆ. ಇವರ ಶಾಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಗಮಕ, ದೇವರನಾಮ, ಸೌಂದರ್ಯ ಲಹರಿ ಮುಂತಾದವುಗಳನ್ನು ಹೇಳಿಕೊಡುತ್ತಾರೆ. ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳ ಹಾಗೂ ವಯಸ್ಕರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿರುತ್ತದೆ. ಸಂಗೀತ, ಗಮಕ ನೃತ್ಯ ರೂಪಕ ಮುಂತಾದವುಗಳನ್ನು ಪ್ರದರ್ಶಿಸಲು ಅವಕಾಶವಿದೆ.
ನಿರಂತರ ಕಲಾಸೇವೆಯಲ್ಲಿ ಸಕ್ರಿಯ ಪಾಲ್ಗೊಳುವಿಕೆ:
ಗಾನಕೋಗಿಲೆ ಚಂಪಕ ಅವರು ಗಮಕ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಶಿವಮೊಗ್ಗದ ಪ್ರತಿಭಾರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ, ಗಮಕ ಕಲಾಸಂಫದಲ್ಲಿ ಸಕ್ರಿಯರಾಗಿ ಸತತ ಇಪ್ಪತ್ತು ವರ್ಷಗಳಿಂದ ಭಾಗವಹಿಸಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ರಾಜ್ಯದಾದ್ಯಂತ ಹಲವಾರು ಕಡೆ ಇವರ ಕಲಾ ಸೇವೆ ನಡೆಯುತ್ತಿದೆ. ಸೌಂದರ್ಯ ಲಹರಿ, ಗಮಕ ರೂಪಕಗಳ ಶಿಭಿರ ಮತ್ತು ಕಾರ್ಯಗಾರಗಳನ್ನು ನಡೆಸುತ್ತಾರೆ. ಗಮಕ ರೂಪಕಗಳಿಗೆ ರಾಗ ಸಂಯೋಜಿಸುವಲ್ಲಿ ಸಿದ್ಧ ಹಸ್ತರು.
ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಎಲೆ ಮರೆಯ ಕಾಯಿಯಂತೆ ಕಲಾ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ತಾವು ಬೆಳೆದು, ಬೇರೆಯವನ್ನು ಬೆಳೆಸಬೇಕು ಅದರಲ್ಲೇ ತೃಪ್ತಿ ಕಾಣಬಯಸುವ ಇವರು, ’ಖುಷಿ ಹಂಚಿ ಖುಷಿ ಪಡೆಯಬೇಕೆಂಬ’ ನಂಬಿಕೆಯನ್ನು ಇಟ್ಟಿದ್ದಾರೆ. ’ನನ್ನಲ್ಲಾ ಸಾಧನೆಗೆ ಪತಿ ಶ್ರೀಧರ್ ಹಾಗೂ ಪುತ್ರ ಶ್ಯಾಮಶಂಕರ ಅವರ ಅನಂತ ಪ್ರೋತ್ಸಾಹವೇ ಕಾರಣ’ ಎಂದು ಪುನರುಚ್ಛಿಸಿದರು.
ಪ್ರಶಸ್ತಿ ಪುರಸ್ಕಾರಗಳು
ಚಂಪಕ ಅವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾಸಿವೆ. ’ಗಮಕ ಕಲಾನಿಧಿ ಹಾಗೂ ’ಗಮಕ ಕೋಗಿಲೆ’ ಎಂಬು ಬಿರುದುಗಳಿಗೆ ಪಾತ್ರರಾಗಿದ್ದಾರೆ.  ಹೊಸಹಳ್ಳಿಯಲ್ಲಿ ನಡೆದ ಅಹೋರಾತ್ರಿ ಗಮಕ ಸಮ್ಮೇಳನದಲ್ಲಿ ಹಾಡಿ ಜನಮೆಚ್ಚುಗೆ ಗಳಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಭಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಇವರು ’ಸೌಂದರ್ಯ ಲಹರಿ’ ಧ್ವನಿ ಸುರುಳಿಯನ್ನು ಹೊರತಂದಿದ್ದಾರೆ. ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಎಂಟು, ಒಂಬತ್ತು ಮತ್ತು ಹತ್ತನೇ ತರಗತಿಯವರಿಗಾಗಿ ತಂದಿರುವ ಪಠ್ಯೇತರ ಗಮಕ ಸುರುಳಿಯಲ್ಲಿ ಹಾಡಿದ್ದಾರೆ. ಬೆಂಗಳೂರಿನ ಕುವೆಂಪು ಪ್ರತಿಷ್ಠಾನದವರು ಹೊರತಂದ ಕುವೆಂಪು ರಾಮಾಯಣ ದರ್ಶನಂ ಧ್ವನಿ ಸುರುಳಿಯಲ್ಲಿ ಹಾಡಿದ್ದಾರೆ.

ಲೇಖನ: ರಮಾ ಎಸ್ ಅರಕಲಗೂಡು