ನಾವು ಎಂಥಹದೇ ಸಂಗತಿ-ಸನ್ನಿವೇಷಗಳಲ್ಲಿ ಆನಂದವಾಗಿರಬೇಕು. ಆನಂದ, ಸಂತೋಷ ಎನ್ನುವುದು ಮೂಲಭೂತವಾದ ಗುಣ. ನಮ್ಮ ನೋವು,ದು;ಖ,ಅಸಹನೆ,ಅಸಂತೋಷ ಹಾಗೂ ನೆಮ್ಮದಿಯಿಲ್ಲದ ಪರಿತಾಪಕ್ಕೆ ಇರುವ ಬಾಹ್ಯ ಕಾರಣ,ಆಂತರಿಕ ಕಾರಣಗಳನ್ನು ನಾವು ನಿವಾರಿಸಿಕೊಳ್ಳಬೇಕು. ಕ್ಷೆಭೆಯಿಂದ ನಮ್ಮ ಪ್ರಗತಿಗೆ, ಸಾಧನೆಗೆ ಕುಂದುಂಟಾಗುವುದರಿಂದ,ನಾವು ಯಾವುದೇ ಕಾರಣಕ್ಕೂ ಕ್ಷೆಭೆಗೊಳಗಾಗಬಾರದು.ಬಾಹ್ಯ ಸನ್ನಿವೇಷಗಳು ನಮ್ಮ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು. ಧ್ಯಾನ.ಜಪ,ಓದು, ಕೆಲಸ,ಎಲ್ಲದಕ್ಕು ಮೊದಲು ನಾವು ಪ್ರಶಾಂತ ಮನಸ್ಸನ್ನು ಬೆಳೆಸಿಕೊಳ್ಳಬೇಕು.ನಾವು ನಮ್ಮ ಸುತ್ತಲಿರುವವರ ತಪ್ಪುಗಳನ್ನು ತಿದ್ದಲು ಸಾಧ್ಯವಿಲ್ಲ. ಇದನ್ನರಿತು ಆದರ್ಶಕ್ಕಾಗಿ ನಾವು ಹೋರಾಡಬೇಕು. ಹೇಡಿಗಳು, ದುರ್ಬಲರು ನಾವಾಗಬಾರದು.
ಮನಸ್ಸೆಂಬುದು ಮರ್ಕಟ.ಅದು ಕ್ಷಣ ಮಾತ್ರದಲ್ಲಿ ಎಲ್ಲೆಂದರಲ್ಲಿ ಹರಿಯುವುದು ಅದನ್ನು ಹಿಡಿದಿಡಲು ಜಪ, ಧ್ಯಾನದಲ್ಲಿ ಕೇಂದ್ರೀಕರಿಸುವುದಲ್ಲದೇ ಸದಾ ಯಾವುದಾದರೂ ನಮ್ಮ ಮನಸ್ಸಿಗೆ ಸಂತಸಕೊಡುವ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ಖಾಲಿ ತಲೆ ದೆವ್ವಗಳ ವಾಸ ಸ್ಥಾನವಾಗಬಾರದು. ಜಪ.ಧ್ಯಾನಗಳಿಂದಲೂ ಅಪಾರ ಶಕ್ತಿ ಪಡೆಯಬಹುದು. ನಾವು ನಿದ್ರಿಸುವಾಗ ನಮಗೆ ಅತ್ಯಂತ ಪ್ರಿಯರಾದವರ ಬಗ್ಗೆ ಕೂಡ ಚಿಂತಿಸುವುದಿಲ್ಲ ಅಲ್ಲವೇ? ಹಾಗೆಯೇ ಜಪ ಮಾಡುವಾಗಲು ಬಾಹ್ಯ ಜಗತ್ತಿನ ಅರಿವು ಪೂರ್ಣವಾಗಿ ಇಲ್ಲವಾಗಿಸಿ ನಮ್ಮ ಅಂತರಂಗದಲ್ಲಿರುವ ಅನಂತ ತತ್ವದೊಡನೆ ಪ್ರಜ್ಞಾ ಪೂರ್ವಕವಾಗಿ ಸಂಬಂಧ ಕಲ್ಪಸಿಕೊಳ್ಳುವುದರಿಂದ ನಾವು ಆನಂದವಾಗಿರಲು ಸಾಧ್ಯ.
ಹೋಲಿಕೆಯಿಂದ ಕೀಳರಿಮೆ ಇಲ್ಲವೇ ಅಹಂಕಾರ ಉಂಟಾಗುತ್ತದೆ. ಆದ್ದರಿಂದ ಹೋಲಿಕೆ ಬೇಡ ಕಲಿಕೆ ಇರಲಿ.ಮತ್ತೊಬ್ಬರೊಡನೆ ನಮ್ಮನ್ನು ಹೋಲಿಸಿಕೊಳ್ಳದೆ ನಮ್ಮ ವ್ಯಕ್ತಿವೈಶಿಷ್ಠ್ಯಕ್ಕನುಗುಣವಾಗಿ ನಾವು ಬಾಳಿ ಬೆಳೆಯಬೇಕು ಬದುಕಬೇಕು. ಪ್ರತಿಯೊಬ್ಬರಲ್ಲಿ ತಮ್ಮದೇ ಆದ ಶಕ್ತಿ ಸಾಮರ್ಥ್ಯಗಳಿರುವಂತೆ ದಾರಿ ಗುರಿ ಬೇರೆ ಬೇರೆಯಾಗಿರುತ್ತವೆ. ಹೋಲಿಕೆಯಿದ್ದಾಗ ಇತರರ ಸುಖ ಯಶಸ್ಸಿನಿಂದ ನಮಗೆ ನೋವುಂಟಾಗಿ ಇನ್ನಷ್ಟು ಕುಗ್ಗುವಂತಾಗುತ್ತದೆ. ಹೋಲಿಕೆಯು ಅತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ಹೋಲಿಸಿಕೊಳ್ಳುವ ಮನೋಭಾವ ಪ್ರೌಢ ವ್ಯಕ್ತಿತ್ವದ ಗುರುತಲ್ಲ. ನಮ್ಮ ಬಗ್ಗೆ ವಸ್ತುನಿಷ್ಠತೆಯಲ್ಲಿ ನಮ್ಮನ್ನು ನಾವು ಅಳೆದುಕೊಳ್ಳಬಹುದಷ್ಠೆ.ಹೋಲಿಸಿದಾಗ ಗುರುತಿಸಿದ ದೌರ್ಬಲ್ಯ ಅಥವಾ ದುರ್ಗುಣಗಳು ಕೀಳರಿಮೆಗೂ,ಸದ್ಗುಣಗಳು ಅಹಂಕಾರಕ್ಕೂ ಕಾರಣವಾಗುತ್ತದೆ.
ಮಕ್ಕಳು ಬಳಲದಂತೆ ಪೋಷಕರು ಮಕ್ಕಳಲ್ಲಿ ಪ್ರಶಾಂತ ಮನಸ್ಸಿನೊಂದಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು. ಆರೋಗ್ಯಪೂರ್ಣ ಕಲಿಕೆ, ಆಧ್ಯಾತ್ಮಿಕ ಮನಸು, ಪ್ರಾಪಂಚಿಕ ಆಗುಹೋಗುಗಳ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಆಗ ಮೇಲರಿಮೆ, ಕೀಳರಿಮೆ,ಅಹಂಕಾರವಿಲ್ಲದೆ,ಸಾಧನೆಯ ಸಾಮರ್ಥ್ಯ ಹೆಚ್ಚುತ್ತದೆ.ಹಾಗಾದಾಗ ಈ ಸುಂದರ ಪ್ರಪಂಚದಲ್ಲಿ ಆನಂದವಾಗಿರಲು ಸಾಧ್ಯ.
 ಸೀತಾ, ಹರಿಹರ.
ಮೊ; 9448905593