ಕೊಡೆ ಅಂದ ತಕ್ಷಣ ನೆನಪಾಗುವುದು ನನ್ನ ಅಜ್ಜನ ದೊಡ್ಡ ಕಪ್ಪನೆಯ ದೊಡ್ಡ ಕೊಡೆ. ಬಿಸಿಲಿರಲಿ, ಮಳೆಯಿರಲಿ ಅಜ್ಜ ಹೊರಗೆ ಹೊರಟನೆಂದರೆ ಕೊಡೆಯ ಸಾಥ್ ಇದ್ದೇ ಇರುತ್ತಿತ್ತು. ಮನೆಯಲ್ಲಿ ಆ ಕೊಡೆ ನೇತು ಹಾಕಲು ನಿರ್ದಿಷ್ಟವಾದ ಸ್ಥಳದಲ್ಲಿ ಗೋಡೆಯ ಮೇಲೆ ಹೊಡೆದಿದ್ದ ಒಂದು ಮೊಳೆ ಅದಕ್ಕೆಂದೇ ಮೀಸಲಾಗಿತ್ತು. ಆ ಕೊಡೆ ಮಳೆ, ಬಿಸಿಲಿಗೆ ಅಜ್ಜನ ತಲೆ ಮೇಲೇರಿದರೆ ಉಳಿದ ಸಮಯದಲ್ಲಿ ಅಜ್ಜನ ಊರುಗೋಲಾಗಿರುತ್ತಿತ್ತು.
ಚಿಕ್ಕವರಿದ್ದಾಗ ಹತ್ತಿರದ ಸರ್ಕಾರಿ ಶಾಲೆ ಬಿಟ್ಟು ಇಂಗ್ಲೀಷ್ ಮೀಡಿಯಮ್ ಶಾಲೆಗೆಂದು ದೂರದ ಶಾಲೆಗೆ ಸೇರಿದ ಮೇಲೆ ನಮಗೂ ಕೊಡೆ ತೆಗೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಆಗ ಅಪ್ಪ ಅಜ್ಜನ ಕೊಡೆಯ ತರಹದ ಉದ್ದನೆಯ ಎರಡು ಕೊಡೆಗಳನ್ನು ತಂಗಿಗೆ ಮತ್ತು ನನಗೆ ತಂದಿದ್ದರು. ಅವುಗಳನ್ನು ಹಿಡಿದು ಶಾಲೆಗೆ ಹೋದಾಗ ಎಲ್ಲರೂ ಅಜ್ಜನ ಛತ್ರಿ ಎಂದು ಅಪಹಾಸ್ಯ ಮಾಡಿದಾಗ ಅಪಮಾನದಿಂದ ಕಣ್ಣಲ್ಲಿ ನೀರು ಬಂದಿತ್ತು. ಅಂದು ಮನೆಗೆ ಬಂದು ಇದು ಅಜ್ಜನ ಛತ್ರಿಯ ಹಾಗಿದೆ ನನಗೆ ಬೇಡವೇ ಬೇಡ ಎಂದು ಹಠ ಮಾಡಿ ಸಂಜೆ ಪೇಟೆಗೆ ಹೋಗಿ ಸಣ್ಣನೆಯ ಬಣ್ಣಬಣ್ಣದ ಫೋಲ್ಡಿಂಗ್ ಛತ್ರಿ ಕೊಡಿಸಿಕೊಂಡು ಬಂದಿದ್ದೆ. ಮರುದಿನ ಅದನ್ನು ಶಾಲೆಯಲ್ಲಿ ಗೆಳತಿಯರ ಮುಂದೆ ಹೆಮ್ಮೆಯಿಂದ ಪ್ರದರ್ಶನ ಮಾಡಿ ಬೀಗಿದ್ದ ನೆನಪು ಈಗಲೂ ಮನದಲ್ಲಿ ಹಚ್ಚಹಸಿರಾಗಿದೆ.

-ನಳಿನಿ. ಟಿ. ಭೀಮಪ್ಪ
ಧಾರವಾಡ