ಚಿತ್ರದುರ್ಗ: ಚಿತ್ರದುರ್ಗ ನಗರದ ಲಿಂಗಂ ಮನೆತನದ  ಅಖಿಲಾ ಪ್ರವೀಣ್ ಅವರಿಗೆ ಕರ್ನಾಟಕ ಆರ್ಯವೈಶ್ಯ ಮಹಾಸಭೆಯು ಚಿತ್ರದುರ್ಗ ಜಿಲ್ಲೆಯ 2018 ರ ಮಹಿಳಾ ಸಾಧಕಿ  ಪ್ರಶಸ್ತಿಯನ್ನು ನೀಡುವುದಾಗಿ ಪ್ರಕಟಿಸಿದೆ ಎಂದು ನಿರ್ದೇಶಕ ಹಾಗೂ ರಾಜ್ಯ ವಾಸವಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಪಿ.ಎಲ್ ಸುರೇಶರಾಜು ತಿಳಿಸಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಖಿಲಾ ಪ್ರವೀಣ್ ಅವರದು ಇನಿದನಿಯ ಗಾಯನಕ್ಕೆ ಮತ್ತೊಂದು ಹೆಸರು. ಚಿತ್ರದುರ್ಗದ ಉದ್ಯಮಿ ಎಲ್.ಆರ್  ಪ್ರಕಾಶಕುಮಾರ್ ಮತ್ತು ಸುಮಾ ಪ್ರಕಾಶ್ ದಂಪತಿಗಳ ಮೊದಲ ಪುತ್ರಿ  ಹಾಗೂ ಕೃಷ್ಣಗಿರಿಯ ಕರೂರು ವೈಶ್ಯ ಬ್ಯಾಂಕಿನ ಮೇನೇಜರ್ ಪ್ರವೀಣ್ ಅವರ ಪತ್ನಿ ಆಗಿರುವ ಅಖಿಲಾ ವಾಸವಿ ಮೆಲೋಡೀಸ್ ಸಂಸ್ಥೆಯ ಕ್ರಿಯಾಶೀಲ ಕರೋಕೆ ಗಾಯಕಿಯಾಗಿ ಮನೆಮಾತಾಗಿದ್ದಾರೆ. ಅಲ್ಲದೆ ಸಾಹಿತ್ಯ ಜಗಲಿಯಲ್ಲಿ ಅವರ ಆಪ್ತಗಾಯನ ಸಿಲಿಗುರಿಯಿಂದ ತಿರುವನಂತಪುರಂವರೆಗೆ ಹೆಸರುವಾಸಿಯಾಗಿದೆ. ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಪಾಸು ಮಾಡಿರುವ ಇವರು ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ನಲ್ಲಿ ಒಂದು ವರ್ಷದ ಹಿನ್ನೆಲೆ ಗಾಯನ ಡಿಪ್ಲೊಮಾ ಪಡೆದಿದ್ದಾರೆ. ಅಖಿಲಾ ಅವರು ಹಲವಾರು ಚಿತ್ರಗಳಲ್ಲಿ ಟ್ರ್ಯಾಕ್ ಹಾಡುಗಾರರೂ  ಸಹ ಆಗಿದ್ದಾರೆ. ಲಂಬಾಣಿ ಭಾಷೆಯ ಚಿತ್ರವೊಂದರಲ್ಲಿ ಇವರು ಹಿನ್ನೆಲೆ ಗಾಯಕಿ ಆಗಿದ್ದಾರೆ. ಭರ್ಜರಿ, ಮಿಸ್ಟರ್ ಎಲ್.ಎಲ್.ಬಿ, ಖನನ (ಇನ್ನೂ ಬಿಡುಗಡೆ ಆಗಿಲ್ಲ) ಚಿತ್ರಗಳಲ್ಲಿ ಇವರು ಕಂಠದಾನ ಕಲಾವಿದೆಯಾಗಿದ್ದಾರೆ. ಕಂಠದಾನ ಕಲಾವಿದರ ಸಂಸ್ಥೆಯ ಸದಸ್ಯರೂ ಸಹ ಆಗಿದ್ದಾರೆ. ಮೂರು ಆಲ್ಬಂಗಲ್ಲಿ ಹಾಡಿರುವ ಅಖಿಲಾ ಚಿತ್ರದುರ್ಗದ ಎಲ್ಲಾ ವೇದಿಕೆಗಳಲ್ಲಿ ಹಾಡಿ ಸಂಗೀತಪ್ರೇಮಿಗಳ ಮನ ಗೆದ್ದಿದ್ದಾರೆ. ಗೃಹಕೃತ್ಯ ಮತ್ತು ಸಂಗೀತ ಎರಡನ್ನೂ ಯಶಸ್ವಿಯಾಗಿ ತೂಗಿಸಿಕೊಂಡು ಹೋಗುತ್ತಿರುವ ಅಖಿಲಾ ಗರ್ವದ ಲವಲೇಶವೂ ಇಲ್ಲದ ಗಾಯಕಿ.

ಅಖಿಲಾ ಅವರನ್ನು ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್  ಕಾಶಿವಿಶ್ವನಾಥ ಶೆಟ್ಟಿ, ಸಾಹಿತ್ಯ  ಜಗಲಿಯ ಸಾರಥಿ ರಾ. ವೆಂಕಟೇಶ ಶೆಟ್ಟಿ ಅವರುಗಳನ್ನು ಒಳಗೊಂಡಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.