ಚಿನ್ನಮ್ಮನ ಲಗ್ನ, ಪತ್ಮಂದೆ; ಸೂಕ್ಷ್ಮ ಒಳನೋಟಗಳ ಸುಂದರ ಕೃತಿಗಳು: ಜೋಗಿ ಪ್ರಶಂಸೆ
‘ಬುಕ್ ಬ್ರಹ್ಮ’ ಸಹಯೋಗದಲ್ಲಿ ಅಂಕಿತ ಪುಸ್ತಕವು ಫೇಸ್ ಬುಕ್ ಲೈವ್ ನಲ್ಲಿ ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕ ಕೆ. ಸತ್ಯನಾರಾಯಣ ಅವರ ಪ್ರತಿಸ್ಪಂದಾತ್ಮಕ ಸ್ವರೂಪದ ಕೃತಿ ‘ಚಿನ್ನಮ್ಮನ ಲಗ್ನ-1893 ಹಾಗೂ ಅನು ಬೆಳ್ಳೆ ಅವರ ಪತ್ಮಂದೆ-ಕಾದಂಬರಿಯನ್ನು ಖ್ಯಾತ ಲೇಖಕ ಹಾಗೂ ಅಂಕಣಕಾರ ಜೋಗಿ ಅವರು ಬಿಡುಗಡೆ ಮಾಡಿದರು.

ನಂತರ ಮಾತನಾಡಿ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಸೂಕ್ಷ್ಮ ಒಳನೋಟಗಳನ್ನು ಹೆಕ್ಕಿ ಆ ಕುರಿತ ಟಿಪ್ಪಣಿಗಳನ್ನು ಅಷ್ಟೇ ಸೂಕ್ಷ್ಮವಾಗಿ ದಾಖಲಿಸಿದ್ದು ಲೇಖಕರ ವಿದ್ವತ್ತಿಗೆ ಕನ್ನಡಿ ಹಿಡಿಯುತ್ತದೆ. ಮೂಲ ‘ಮಲೆಗಳಲ್ಲಿ ಮದುಮಗಳು ಕಾದಂಬರಿಯಷ್ಟೇ ಮನಸ್ಸಿಗೆ ಆಹ್ಲಾದ ನೀಡುವ ಟಿಪ್ಪಣಿಗಳಿದ್ದು ಲೇಖಕರ ಪ್ರತಿಸ್ಪಂದನೆ ಕ್ರಿಯಾಶೀಲವಾಗಿದ್ದು, ಖುಷಿ ನೀಡುತ್ತವೆ, ವಿಷಯ ವಸ್ತುವನ್ನು ಮೂಲ ಲೇಖಕ ಕಂಡು ಅನುಭವಿಸಿದ ಎಲ್ಲ ಕಾಣ್ಕೆಗಳು, ಚೆನ್ನಮ್ಮನ ಲಗ್ನ-1893′ ಕೃತಿಯು ಸೃಜನಶೀಲವಾಗಿ ಕಟ್ಟಿಕೊಡಲಾಗಿದೆ ಎಂದು ಪ್ರಶಂಸಿಸಿದರು.

ಸಣ್ಣ ಸಂಗತಿಗಳ ದಾಖಲು: ಕಾಡಿನಲ್ಲಿ ಕಾಣಸಿಗುವ ಸಣ್ಣ ಸಣ್ಣ ಸಂಗತಿ-ವಿಷಯ ವಸ್ತುಗಳನ್ನು ಸಹ ದಾಖಲಿಸಿದ್ದು ‘‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ವೈಶಿಷ್ಟ್ಯ ಹಾಗೂ ಹೆಚ್ಚುಗಾರಿಕೆ. ಚಿನ್ನಮ್ಮನ ಲಗ್ನ-1893′ ಪ್ರತಿಸ್ಪಂದನ ಕೃತಿಯ ಟಿಪ್ಪಣಿಗಳೂ ಸಹ ಗಮನ ಸೆಳೆಯುತ್ತವೆ ಎಂದು ಪ್ರಶಂಸಿಸಿದರು.

ಲೇಖಕ ಅನು ಬೆಳ್ಳೆ ಅವರ ಪತ್ಮಂದೆ ಕಾದಂಬರಿ ಕುರಿತು ‘ವ್ಯಾಖ್ಯಾನ, ನಿರೂಪಣೆ ಹಾಗೂ ವರ್ಣನೆಗಳು ಗಮನ ಸೆಳೆಯುತ್ತವೆ. ರಾಜಕೀಯ ವಸ್ತು ಕಾದಂಬರಿಯ ಮೂಲ ಗುಣವಾಗಿದ್ದರೂ ಕಲಾತ್ಮಕ ಶೈಲಿಯಿಂದ ಓದುಗರನ್ನು ಸೆಳೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಲೇಖಕ ಎನ್. ಎಸ್. ಶ್ರೀಧರಮೂರ್ತಿ ಮಾತನಾಡಿ, ಈ ಎರಡೂ ಕೃತಿಗಳ ವಸ್ತು, ನಿರೂಪಣಾ ಶೈಲಿ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಗಮನ ಸೆಳೆಯುತ್ತವೆ ಎಂದು ಶ್ಲಾಘಿಸಿದರು. ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ ಸ್ವಾಗತಿಸಿದರು. ಲೇಖಕರಾದ ಕೆ. ಸತ್ಯನಾರಾಯಣ, ಅನು ಬೆಳ್ಳೆ ಸೇರಿದಂತೆ ಇತರೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದು, ಈ ಎರಡೂ ಕೃತಿಗಳ ಕುರಿತು ಸಂವಾದ ನಡೆಸಿದರು.