ಚಿತ್ರದುರ್ಗ: ನಮ್ಮಲ್ಲಿ ವೈಜ್ಞಾನಿಕ ಅನಕ್ಷರತೆ ಇರುವುದರಿಂದ ಅದನ್ನು ದುರ್ಬಳಕೆ ಮಾಡಿಕೊಂಡು ಕೈಗಾರಿಕೆಗಳು,ಬ್ರೋಮಿನ್ ಯುಕ್ತ ಕೀಟನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳನ್ನು ತಯಾರಿಸಿ ರೈತರನ್ನು,ಕ್ಲೋರಿನ್ ಯುಕ್ತ ಸೌಂದರ್ಯ ವರ್ಧಕ ಸಾಧನಗಳು,ಸುವಾಸಿಕಗಳನ್ನು ಹೇರ್ ಡೈಯರ್ ಗಳನ್ನು,ಲಿಪ್ ಸ್ಟಿಕ್ ಗಳನ್ನು ತಯಾರಿಸಿ ಮಹಿಳೆಯರನ್ನು ,ರೇಫ್ರಿಜರೇಟರ್ ಗಳನ್ನು, ಏರ್ ಕಂಡೀಶನರ್ ಗಳನ್ನು ತಯಾರಿಸಿ ಶ್ರೀಮಂತ ವರ್ಗವನ್ನು ಬಳಕೆಯ ವಸ್ತುಗಳನ್ನಾಗಿ ಮಾಡಿಕೊಂಡಿವೆ. ಅನ್ನ ನೀಡುವ ನೆಲವನ್ನು,ಜೀವ ರಕ್ಷಕ ಓಜೋನ್ ಪದರವನ್ನು ನಾಶ ಮಾಡುವುದರ ಮೂಲಕ,ನಿಂತ ನೆಲ ಮತ್ತು ತಲೆಯ ಮೇಲಿನ ಆಕಾಶವನ್ನು ಹದಗೆಡಿಸಿ ಲಾಭ ಮಾಡಿಕೊಳ್ಳುತ್ತಿವೆ ಎಂದು ವಿಜ್ಞಾನ ಕೇಂದ್ರದ ಸದಸ್ಯ, ಭೌತಶಾಸ್ತ್ರ ಉಪನ್ಯಾಸಕ ಶ್ರೀ ಕೆ.ರಾಜ್ ಕುಮಾರ್ ಅವರು ದೂರಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರ, ಪಿ.ವಿ.ಎಸ್.ಶಿಕ್ಷಣ ಮಹಾವಿದ್ಯಾಲಯ,ರೋಟರಿ ಕ್ಲಬ್ ಜೋಗಿಮಟ್ಟಿ ಮತ್ತು ಬ್ರೇಕ್ ತೃ ಸೈನ್ಸ್ ಸೊಸೈಟಿ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ, ಪಿ.ವಿ.ಎಸ್.ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ “ವಿಶ್ವ ಓಜೋನ್ ದಿನಾಚರಣೆ”ಯ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಭೂಮಂಡಲದ ಎಲ್ಲಾ ಜೀವಿಗಳಿಗೂ ರಕ್ಷಾ ಕವಚವಾದ ಓಜೋನ್ ಅನಿಲ ಪದರವು ಭೂಮಿಯಿಂದ ಸುಮಾರು 15 ರಿಂದ 35 ಕಿಲೋಮೀಟರ್ ಎತ್ತರದಲ್ಲಿ ಹರಡಿಕೊಂಡಿದ್ದು, ಸೂರ್ಯನಿಂದ ಬರುವ ಅಪಾಯಕಾರಿ ನೇರಳಾತೀತ ಕಿರಣಗಳ ಶಕ್ತಿಯನ್ನು ಕುಗ್ಗಿಸಿ ಅಪಾಯಕಾರಿಯಲ್ಲದ ಸ್ಥಿತಿಗೆ ತಂದು ಜೀವಿಗಳನ್ನು ರಕ್ಷಿಸುತ್ತದೆ. ಆದರೆ ಇಂದು ಕ್ಲೋರೋ ಫ್ಲೋರೋ ಕಾರ್ಬನ್ ಎಂಬ ಮಾರಕ ವಸ್ತುಗಳಿಂದ ಬಿಡುಗಡೆಯಾಗುವ ಕ್ಲೋರಿನ್ ಅಣುಗಳು ಮತ್ತು ಬ್ರೋಮಿನ್ ಅಣುಗಳು ಮೇಲೇರಿ,ಓಜೋನ್ ಅಣುಗಳನ್ನು ಸೀಳಿ, ಪದರವನ್ನು ತೆಳು ಇಲ್ಲವೇ ರಂಧ್ರ ಮಾಡಿರುವುದರಿಂದ ಅಪಾಯಕಾರಿ ವಿಕಿರಣಗಳು ಭೂಮಿಗೆ ತಲುಪಿ,ಮಾನವನ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡಿವೆ ಎಂದರು.

ಶಕ್ತಿಶಾಲಿ ವಿಕಿರಣಗಳು ದೇಹದ ಒಳಹೊಕ್ಕು,ಜೀವಿಯ ರಚನೆಯ ಮೂಲ ಘಟಕವಾದ ಡಿ.ಎನ್.ಎ. ಅಣುವಿನಲ್ಲಿ ಬದಲಾವಣೆ ಉಂಟು ಮಾಡಿ,ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವಂತೆ, ಆಮಾಯಕ ಜನರಲ್ಲಿ,ಪ್ರಾಣಿಗಳಲ್ಲಿ ಅನುವಂಶೀಯ ಕಾಯಿಲೆಗಳು,ಕ್ಯಾನ್ಸರ್,ಕಣ್ಣಿನಪೊರೆ,ಸರ್ಪಸುತ್ತು,ಚರ್ಮದ ಬಿರುಕಿನ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವಂತೆ ಮಾಡಿವೆ.ಸಸ್ಯಗಳಲ್ಲಿ ಆಹಾರ ಉತ್ಪಾದನಾ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿವೆ. ಶಕ್ತಿಶಾಲಿ ವಿಕಿರಣಗಳು ಸಾಗರ-ಸಮುದ್ರಗಳ ನೀರಿನಲ್ಲಿ ಸುಮಾರು 20 ಮೀಟರ್ ಆಳದವರೆಗೆ ನುಗ್ಗಿ ಆಲ್ಲಿನ ನವಿರಾದ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳನ್ನು ನಾಶ ಮಾಡಿ , ಆಹಾರ ಸರಪಣಿ ಯಲ್ಲಿ ಏರುಪೇರು ಉಂಟು ಮಾಡುತ್ತಿವೆ.ಓಜೋನ್ ಮಾರಕ ವಸ್ತುಗಳನ್ನು ಬಳಸುತ್ತಿರುವ ಕೈಗಾರಿಕೆಗಳು ಓಜೋನ್ ಸ್ನೇಹಿ ತಂತ್ರಜ್ಞಾನ ವನ್ನು ಅಳವಡಿಸಿಕೊಳ್ಳಬೇಕಾದ ತುರ್ತು ಅವಶ್ಯಕತೆ ಇದೆ.

ಸಾರ್ವಜನಿಕರು ಓಜೋನ್ ಸ್ನೇಹಿ ಉಪಕರಣಗಳನ್ನು ಬಳಸುವುದರ ಮುಲಕ, ರೈತರು ಮೇಥೈಲ್ ಬ್ರೋಮೈಡ್ ಯುಕ್ತ ರಸ ಗೊಬ್ಬರ ತೊರೆದು ಸಾವಯವ ಕೃಷಿ ಮಾಡಬೇಕೆಂದು ಕರೆಕೊಟ್ಟರು.
ಇದಕ್ಕೂ ಮುನ್ನ ಆಶಯ ಭಾಷಣ ಮಾಡಿದ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಜೆ.ಯಾದವರೆಡ್ಡಿ ಅವರು,ಒಂದೇ ಗುಂಪಿನ ಅಣುಗಳಾದ ಆಮ್ಲಜನಕ ಉಸಿರು ನೀಡಿದರೆ, ಓಜೋನ್ ಜೀವಿಗಳನ್ನು ರಕ್ಷಿಸಿ ನಾವು ನೆಮ್ಮದಿಯಿಂದಿರಲು ಕಾರಣವಾಗಿದೆ.ಓಜೋನ್ ಪದರಕ್ಕೆ ರಂಧ್ರವಾದರೆ ಹೃದಯಕ್ಕೆ ರಂಧ್ರವಾದಂತೆ.ಓಜೋನ್ ನಾಶ ಅತ್ಯಂತ ಶ್ರೀಮಂತ ದೇಶಗಳ ಕೊಡುಗೆ.ಮಿತಿಮೀರಿದ ಜೀವನ ಶೈಲಿಯಿಂದ ಶೇಕಡ 82 ರಷ್ಟು ಓಜೋನ್ ನಾಶ ಇಂತಹ ದೇಶಗಳಿಂದ ಆಗಿದೆ.ಫ್ರಿಜ್ ಒಂದು ಶವ ಪೆಟ್ಟಿಗೆ ಇದ್ದಂತೆ. ಅದರಲ್ಲಿಟ್ಟ ಆಹಾರ ಸತ್ತ ಆಹಾರ. ಹೆಚ್ಚು ಕಾಲ ಇಟ್ಟಷ್ಟು ಆಹಾರದಲ್ಲಿ ಹೆಚ್ಹೆಚ್ಚು ಬದಲಾವಣೆಯಾಗುತ್ತದೆ ಎಂದರು.

ಅಂತಹ ಸತ್ತ,ತಂಪು ಆಹಾರವನ್ನು ತಿನ್ನುವುದರಿಂದ ಅಂಗಾಂಗಗಳ ಕ್ರಿಯಾ ವಿನ್ಯಾಸದಲ್ಲಿ ಬದಲಾವಣೆಯಾಗಿ ವ್ಯವಸ್ಥಿತವಾಗಿ ಕ್ರಿಯೆ ನಡೆಯಲಾರದು. ಕಾಡು ಪ್ರಾಣಿಗಳು ನೈಸರ್ಗಿಕ ಆಹಾರವನ್ನು ತಿಂದುಅರೋಗ್ಯವಾಗಿವೆ. ಮನುಷ್ಯ ಹುಸಿ ಪ್ರತಿಷ್ಠೆಯಿಂದ ಐಷಾರಾಮಿ ಜೀವನ ಶೈಲಿಗೆ ಬದಲಾಗಿ ಅವನ ಆಯಸ್ಸು ಕಡಿಮೆಯಾಗಿದೆ.ಬಡವರು ಬೇಗ ಸಾಯುವುದಿಲ್ಲ.ಆದರೆ ಶ್ರೀಮಂತರು ಓಜೋನ್ ನಾಶಕ್ಕೆ ಕಾರಣವಾಗಿ,ತಾವು ಅಕಾಲಿಕ ಮರಣಕ್ಕೆ ತುತ್ತಾಗುವುದಲ್ಲದೆ ಬಡವರನ್ನು ಸಾಯಿಸುತ್ತಾರೆ.ಆದ್ದರಿಂದ ಪರಿಸರ ನಾಶ ಮಾಡುವ ವಸ್ತುಗಳನ್ನು ಬಳಸಲೇ ಬೇಡಿ ಎಂದು ಕರೆಕೊಟ್ಟರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ವಿ.ಎಸ್.ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಹೆಚ್.ವಿ. ನಾಗರತ್ನಮ್ಮ ಮಾತನಾಡಿ,ನಮ್ಮ ಅವಶ್ಯಕತೆಗಳು ಪರಿಸರಕ್ಕೆ ಪೂರಕವಾಗಿರಬೇಕು.ಓಜೋನ್ ಪದರಕ್ಕೆ ಮಾರಕವಾದ ಸಿ.ಎಫ್.ಸಿ.ಗಳನ್ನು ಬಿಡುಗಡೆ ಮಾಡುವ ಫ್ರಿಜ್ ಬಳಸುವ ಬದಲು ಅಂದಿನ ಆಹಾರವನ್ನು ಅಂದೆ ತಿನ್ನುವಂತೆ ಮನವಿ ಮಾಡಿದರು.

ಓಜೋನ್ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ , ಪ್ರಥಮ ಬಹುಮಾನ ಪಡೆದ ಮಮತಾ.ಎನ್, ದ್ವಿತೀಯ ಬಾಲರಾಜ್ .ಎನ್ ಮತ್ತು ತೃತೀಯ ಬಹುಮಾನ ಪಡೆದ ಸಂಜಯ್.ಟಿ.ಈ. ಇವರಿಗೆ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್. ದಾಸೇಗೌಡ ಬಹುಮಾನ ವಿತರಿಸಿದರು. ವಿಜ್ಞಾನ ಕೇಂದ್ರದ ಸದಸ್ಯರಾದ ಶ್ರೀ ಎ. ಎನ್. ಚಂದ್ರಪ್ಪ ಅವರು ಪ್ರಶಿಕ್ಷಣಾರ್ಥಿಗಳೊಂದಿಗೆ ಓಜೋನ್ ಕುರಿತು ಸಂವಾದ ನಡೆಸಿಕೊಟ್ಟರು. ರೋಟರಿ ಕ್ಲಬ್ ಜೋಗಿಮಟ್ಟಿ ಅಧ್ಯಕ್ಷರಾದ ಮಧುರಾ.ಎಸ್.ಕುಮಾರ್, ಬ್ರೇಕ್ ತೃ ಸೈನ್ಸ್ ಸೊಸೈಟಿಯ ಸುಬ್ರಹ್ಮಣ್ಯ, ವಿವೇಕ್,ವಿಜ್ಞಾನ ಕೇಂದ್ರದ ಸಹಕಾರ್ಯದರ್ಶಿ ನವೀನ್.ಪಿ.ಆಚಾರ್,ಕಾಲೇಜಿನ ಉಪನ್ಯಾಸಕರಾದ ಉಷಾ, ಶ್ರೀನಿವಾಸ್, ಎ. ಕವಿತಾ, ಶಾದ್ಯಾ ಫರೀನ್,ಗೋವಿಂದರಾಜು ಮತ್ತು ಪಾಲಯ್ಯ ಉಪಸ್ಥಿತರಿದ್ದರು.ಆರಂಭದಲ್ಲಿ ಪ್ರಾರ್ಥನೆಯನ್ನು ಅರ್ಪಿತಾ ಮತ್ತು ಸಂಗಡಿಗರು,ಸ್ವಾಗತವನ್ನು ಶ್ಯಾಮಿಲಿ, ವಂದನಾರ್ಪಣೆ ಯನ್ನು ಎನ್. ಬಸವರಾಜ ನಡೆಸಿಕೊಟ್ಟರು.ಬಾಂಡ್ರಪ್ಪ.ಎಚ್. ಕಾರ್ಯಕ್ರಮವನ್ನು ನಿರೂಪಿಸಿದರು.