ಭೂಮಿಯ ಮೇಲೆ ಇರುವ ಯಾವ ಜೀವಿಗೂ ಸಹ ಪ್ಲಾಸ್ಟಿಕ್ ನ್ನು ನಿರ್ಮೂಲ ಮಾಡುವ ಶಕ್ತಿ ಇಲ್ಲ, ಅಂತಹ ಒಂದು ಕೀಟವನ್ನು, ಕ್ರಿಮಿಯನ್ನು, ಸೂಕ್ಷಜೀವಿ, ಪ್ರಾಣಿಯನ್ನು, ಮನುಷ್ಯನಿಂದ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ನಾಶ ಮಾಡುವ ಕೀಟ, ಸೂಕ್ಷಜೀವಿ, ಕ್ರಿಮಿಯನ್ನು, ಉತ್ಪಾದನೆ ಮಾಡಿದರೆ ಅದು ಎಲ್ಲಾ ಉಪಯೋಗಿ ಪ್ಲಾಸ್ಟಿಕ್ ವಸ್ತುಗಳನ್ನು ತಿಂದು ದೊಡ್ಡ ಅನಾಹುತವನ್ನೇ ಉಂಟು ಮಾಡುತ್ತದೆ. ಹಾಗಾಗಿ, ಹಿತಮಿತವಾಗಿ ಪ್ಲಾಸ್ಟಿಕ್ ಅನ್ನು ಬಳಕೆ ಮಾಡುವುದೇ ಹೆಚ್ಚು ಸೂಕ್ತವಾದ ಉಪಾಯವಾಗಿದೆ ಎಂದು ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.

ಅವರು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜಾನ್ ಮೈನ್ಸ್ ವತಿಯಿಂದ, ಸಿರಿಗೆರೆ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆಯಲ್ಲಿ “ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಸಮಾಜ ನಿರ್ಮಾಣ” ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಿದ್ದರು .

ಪರಿಸರದ ಹಾನಿ ಮಾಡುತ್ತಿರುವ ಪ್ಲಾಸ್ಟಿಕ್ ಅನ್ನು, ನಿಯಂತ್ರಿಸುವುದು ಎಷ್ಟು ಕಷ್ಟ ಎಂಬುದು ನಮಗೆ ಈಗ ಅರಿವಿಗೆ ಬರುತ್ತಿದೆ. ರಾಸಾಯನಿಕಗಳಿಂದ ಉತ್ಪನ್ನವಾದ ಪ್ಲಾಸ್ಟಿಕ್, ಮಣ್ಣಿನಲ್ಲಿ ಕರಗದೆ, ಮಾಲಿನ್ಯಕ್ಕೆ ಎಡೆ ಮಾಡಿಕೊಡುತ್ತಿದೆ. ಪ್ರತಿಯೊಂದು ವಸ್ತುಗಳನ್ನು ಸಹ ಪ್ಲಾಸ್ಟಿಕ್ ವಸ್ತುವಿನಿಂದ ಪ್ಯಾಕ್ ಮಾಡುತ್ತಿರುವುದರ ದುಷ್ಪರಿಣಾಮ ಇಂದು ನಾವು ಕಾಣುತ್ತಿದ್ದೇವೆ. ಸಣ್ಣ ಮಗುವಾಗಿದ್ದಾಗಲೇ ಪ್ಲಾಸ್ಟಿಕ್ಕಿನ ದುಷ್ಪರಿಣಾಮಗಳ, ಬಗ್ಗೆ ಶಿಕ್ಷಣ ನೀಡಬೇಕು. ಮಕ್ಕಳ ಮೂಲಕ ಮುಂದಿನ ಜನಾಂಗವನ್ನು ಪರಿಸರ ಸ್ನೇಹಿ ಯನ್ನಾಗಿಸಬೇಕು ಎಂದರು.

ಗ್ರಾಮಗಳಲ್ಲಿ ಪ್ಲಾಸ್ಟಿಕ್ ಭಾರೀ ಅನಾಹುತವನ್ನೇ ಉಂಟು ಮಾಡುತ್ತಿದೆ, ಕೃಷಿಗಾಗಿ ಮೀಸಲಿಟ್ಟ ಜಮೀನಿನಲ್ಲಿ ಪ್ಲಾಸ್ಟಿಕ್ ತುಂಬಿಕೊಳ್ಳುತ್ತಿದೆ. ಮುಂದೊಮ್ಮೆ ರೈತರಿಗೆ ಮಳೆ ನೀರು ಇಂಗಿಸುವುದು, ಬೀಜ ಬಿತ್ತನೆ ಮಾಡುವುದು, ಸಸಿ ಬೆಳೆಸುವುದು, ಅಸಾಧ್ಯವಾಗುತ್ತದೆ. ಕೆರೆ, ಬಾವಿಗಳಲ್ಲಿ, ನೀರು, ಸಂಗ್ರಹಿಸುವ ಜಾಗದಲ್ಲಿ , ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ, ಜಲ ಮಾಲಿನ್ಯ, ನೆಲ ಮಾಲಿನ್ಯ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಜನರು ಎಲ್ಲೆಂದರಲ್ಲಿ ಬೆಂಕಿ ಹಾಕಿ ಸುಡುತ್ತಿರುವುದರಿಂದ, ಪ್ಲಾಸ್ಟಿಕ್ ವಾಯುಮಾಲಿನ್ಯ ಹೆಚ್ಚಾಗುತ್ತಿದೆ, ಪ್ಲಾಸ್ಟಿಕ್ ಸುಟ್ಟಾಗ ಡೈಆಕ್ಸೈನ್ ಎಂಬ ರಾಸಾಯನಿಕ ಕ್ಯಾನ್ಸರ್ ಉಂಟುಮಾಡುತ್ತದೆ ಎಂದರು.
ಸೀನಿಯರ್ ಮೈನ್ಸ್ ಮ್ಯಾನೇಜರ್ ರಣದೀವೆ ಮಾತನಾಡಿ ಕಾರ್ಯಕ್ರಮದ ಉದ್ದೇಶ ಗ್ರಾಮಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದು, ಶಾಲೆಗಳಲ್ಲಿ ಆರೋಗ್ಯವಂತ ಮಕ್ಕಳನ್ನು ಸೃಷ್ಟಿಸುವುದು, ನಮ್ಮ ಜವಾಬ್ದಾರಿ ಎಂದರು.
ಸೀನಿಯರ್ ಮ್ಯಾನೇಜರ್ ರುದ್ರಪ್ಪನವರು ಮಾತನಾಡುತ್ತಾ, ಮಕ್ಕಳು ಸಣ್ಣ ಸಣ್ಣ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು, ಸಂಗ್ರಹಿಸಿಟ್ಟುಕೊಂಡು, ಮರುಬಳಕೆಗೆ ವ್ಯವಸ್ಥೆ ಮಾಡಬೇಕು. ಚಾಕಲೇಟ್, ಬಿಸ್ಕತ್, ಕವರ್ ಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು ಎಂದರು. ಅಸಿಸ್ಟೆಂಟ್ ಮ್ಯಾನೇಜರ್ ಆದ ಸುಭಾಷ್ ರವರು ವಂದಿಸಿದರು.
ನಾಗರಾಜ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಮುಖ್ಯ ಶಿಕ್ಷಕರಾದ ಶ್ರೀ ಎಸ್. ಜೆ .ಮಧು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಮಕ್ಕಳಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಾಣ ಮಾಡಲು ಶಾಲೆಯು ಪ್ರಯತ್ನಿಸುತ್ತಿದೆ ಎಂದರು.