ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಜಾಸ್ತಿ ಕಂಡುಬಂದಿದ್ದು, ಈ ರೋಗ ತಡೆಯಲು ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಅಭಿವೃದ್ದಿ ಅಧಿಕಾರಿಗಳು ಸಂಯುಕ್ತವಾಗಿ ಕಾರ್ಯಯೋಜನೆ ರೂಪಿಸಿ ಸ್ವಚ್ಛತಾ ಕಾರ್ಯಕ್ರಮಕ್ಕಾಗಿ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಮಾದರಿಯನ್ನಾಗಿ ಮಾಡಲು ಜಿ.ಪಂ. ಅಧ್ಯಕ್ಷೆ ಸೌಭಾಗ್ಯಬಸವರಾಜನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿ.ಪಂ. ಸಭಾಂಗಣದಲ್ಲಿ ಸೌಭಾಗ್ಯಬಸವರಾಜನ್‌ರವರ ಅಧ್ಯಕ್ಷತೆಯಲ್ಲಿ ಜರುಗಿದ ಮಾಸಿಕ ಕೆ.ಡಿ.ಪಿ. ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲವೆಂದು ಸಾಕಷ್ಟು ದೂರು ಬರುತ್ತಿದ್ದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಗಮನಹರಿಸಿ ಪಿ.ಡಿ.ಓ.ಗಳು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ವಾರಕ್ಕೊಮ್ಮೆಯಾದರೂ ಭೇಟಿ ನೀಡಿ ಆ ಗ್ರಾಮದ ಕುಂದುಕೊರತೆಗಳ ಬಗ್ಗೆ ಆಲಿಸಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡು ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಲು ಅಧ್ಯಕ್ಷರು ತಾಕೀತು ಮಾಡಿದರು.
ಖಾಸಗಿ ಆಸ್ಪತ್ರೆಯ ವೈದ್ಯರು ಮುಷ್ಕರದಲ್ಲಿ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಬಹಳ ಜನರು ಡೆಂಗ್ಯೂ, ಚಿಕನ್‌ಗುನ್ಯಾಗಳಿಂದ ಬಳಲುತ್ತಿದ್ದಾರೆ. ಇವರ ಸಮಸ್ಯೆ ಕೇಳುವವರಿಲ್ಲದಂತೆ ಆಗಿದೆ. ಕೂಡಲೆ ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿನೀಡಿ ಗ್ರಾಮೀಣ ಜನರ ಆರೋಗ್ಯ ಸಮಸ್ಯೆ ಪರಿಹರಿಸಲು ಕ್ಯಾಂಪ್ ಮಾದರಿಯಲ್ಲಿ ಕ್ರಮ ಜರುಗಿಸಬೇಕೆಂದು ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಂದ್ರನಾಯ್ಕ ಮನವಿ ಮಾಡಿದರು.
ಆಯುಷ್ ಇಲಾಖೆಗೆ ಸರಬರಾಜಾಗಿರುವ ಔಷಧಿಗಳ ಗುಣಮಟ್ಟ ಹಾಗೂ ಎಕ್ಸ್‌ಪೈರಿ ದಿನಾಂಕವನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಅವುಗಳ ಸದ್ಬಳಕೆ ಆಗುವಂತೆ ನೋಡಿಕೊಳ್ಳುವಂತೆ ಅಧ್ಯಕ್ಷರು ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಮೂಲಭೂತ ಸೌಲಭ್ಯಕ್ಕಾಗಿ ೧೪ ರ ಹಣಕಾಸು ಯೋಜನೆಯಡಿಯಲ್ಲಿ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅಧ್ಯಕ್ಷರು ಈ ಹಣವನ್ನು ಬಳಕೆ ಮಾಡಿಕೊಳ್ಳದಿದ್ದರೆ ಮುಂದಿನ ವರ್ಷ ಈ ಯೋಜನೆಗೆ ಜಿಲ್ಲೆಗೆ ಹಣ ಮಂಜೂರಾಗುವುದಿಲ್ಲವೆಂದು ಗೊತ್ತಿದ್ದರೂ ಹಣ ಖರ್ಚು ಮಾಡದೇ ಇರುವ ಅಧಿಕಾರಿಗಳ ಬಗ್ಗೆ ಖೇದ ವ್ಯಕ್ತಪಡಿಸಿದರು. ಬರುವ ಡಿಸೆಂಬರ್ ಒಳಗಾಗಿ ಸಂಪೂರ್ಣ ಅನುದಾನವನ್ನು ಬಳಸಿಕೊಂಡು ಪ್ರಗತಿ ಸಾಧಿಸಲು ಅಧ್ಯಕ್ಷರು ಸೂಚನೆ ನೀಡಿದರು.
ಶಿಕ್ಷಣ ಇಲಾಖೆಯಿಂದ ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ, ಕಟ್ಟಡ ದುರಸ್ತಿಗೆ ನೀಡಿರುವ ಅನುದಾನವನ್ನು ನಿರ್ಮಿತಿ ಕೇಂದ್ರ, ಭೂಸೇನಾ ನಿಗಮ, ಪಿ.ಆರ್.ಡಿ., ಇವುಗಳಿಗೆ ಅನುದಾನ ನೀಡಿ ಸಾಕಷ್ಟು ಕಾಲವಾಗಿದ್ದರೂ ಈ ಹಣ ಬಳಸಿಕೊಂಡು ಕಾಮಗಾರಿ ಕೈಗೊಳ್ಳದಿದ್ದರೆ ನಿರ್ಮಿತಿ ಕೇಂದ್ರ, ಭೂಸೇನಾ ನಿಗಮಕ್ಕೆ ನೀಡಿರುವ ಹಣವನ್ನು ವಾಪಸ್ಸು ಪಡೆದು ಬೇರೆ ಏಜೆನ್ಸಿಗೆ ವಹಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಸುಶೀಲಮ್ಮ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೆಂದ್ರ ನಾಯ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಯೋಜನಾಧಿಕಾರಿ ಓಂಕಾರಪ್ಪ, ಉಪಕಾರ್ಯದರ್ಶಿ ಬಸವರಾಜ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು