ನಿತ್ಯ ಮನೆಯಲ್ಲಿ, ಮನೆಯ ಮುಂದೆ ಇರುವೆಗಳ ಸಾಲುಗಳನ್ನು ನೋಡಿರುತ್ತೀರ ಅಲ್ವ.! ಆ ಇರುವೆಗಳ ಬಗ್ಗೆ ದಾಸೇಗೌಡರು ಲೇಖನ ಬರೆದಿದ್ದಾರೆ ಜ್ಞಾನ-ವಿಜ್ಞಾನ ಕಾಲಂ ನಲ್ಲಿ.

-ಸಂ

ಇರುವೆಗಳು ಸಂಘ ಜೀವಿಗಳು,ಶ್ರಮಜೀವಿಗಳು, ಅವು ಯಾವಾಗಲೂ ಒಗ್ಗಟ್ಟಿನಿಂದ ಕೆಲಸಮಾಡುತ್ತವೆ ಎಂದು ಹೇಳಲಾಗುತ್ತಿದೆ. ಇದು ಒಂದು ಸಾಮಾಜಿಕ ವಿಶ್ಲೇಷಣೆ. ಇರುವೆಗಳ ಜೀವನ ಚಟುವಟಿಕೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದರೆ ಸತ್ಯದ ಅರಿವಾಗುತ್ತದೆ.

ಇರುವೆಗಳು ಒಟ್ಟಾಗಿ ಜೀವಿಸುವುದರಿಂದ ಸಂಘಜೀವಿಗಳೆಂದೂ, ಕ್ರಿಯಾಶೀಲವಾಗಿದ್ದು ಕಷ್ಟದ ಕಾಲಕ್ಕೆ ಆಹಾರ ಸಂಗ್ರಹಿಸಿಟ್ಟು ಕೊಳ್ಳುವುದರಿಂದ ಶ್ರಮಜೀವಿಗಳೆಂದು ಕರೆಯಲಾಗುತ್ತಿದೆ. ಆದರೆ ಇರುವೆಗಳಲ್ಲು ರೋಷ,ಪ್ರೀತಿ, ಆಸೆಗಲುಂಟು. “ಒಗ್ಗಟ್ಟಿನಿಂದ ಕೆಲಸಮಾಡುತ್ತವೆ”ಎನ್ನುವ ವಿಚಾರದಲ್ಲಿ ಒಪ್ಪಲಾಗದು. ಏಕೆಂದರೆ  ಇರುವೆಗಳ ಈ ಕೆಳಗಿನ ಒಂದು ಪ್ರಸಂಗವನ್ನು ಉದಾಹರಣೆಯಾಗಿ ನೋಡೋಣ.

ಇರುವೆಗಳ ಗುಂಪೊಂದು ಕೊಬ್ಬರಿಯ ತುಂಡನ್ನೋ ಕೀಟದ ಲಾರ್ವವನ್ನೋ ಬಾಯಲ್ಲಿ ಕಚ್ಚಿ ಆಹಾರವಾಗಿ ತನ್ನ ಗೂಡಿನ ಕಡೆಗೆ  ಸಾಗಿಸುತ್ತಿರುವುದನ್ನು ನಾವು ನೋಡಿದ್ದೇವೆ. ಈ ಕ್ರಿಯೆಯನ್ನು ನಾವು ನೋಡಿದಾಗ ಇರುವೆಗಳಲ್ಲಿ ಎಷ್ಟೊಂದು ಒಗ್ಗಟ್ಟಿದೆ, ಅವು ಜಾಣ ಇರುವೆಗಳು ಎಂದೆಲ್ಲ ಹೇಳುತ್ತೇವೆ. ಆಹಾರ ಸಾಗುತ್ತಿರುವ ಕಡೆಗೆ ಇರುವ ಇರುವೆಗಳು ಆಹಾರವನ್ನು ಎಳೆಯುತ್ತಿವೆ, ಹಿಂಭಾಗದಲ್ಲಿರುವ ಹಾಗೂ ಅಕ್ಕ ಪಕ್ಕದಲ್ಲಿರುವ  ಇರುವೆಗಳು ಆಹಾರವನ್ನು ತಳ್ಳುತ್ತ ಎಳೆಯುವ ಇರುವೆಗಳಿಗೆ ಸಹಕಾರ ನೀಡುತ್ತಿವೆ ಎಂದು ಅಂದುಕೊಳ್ಳುತ್ತೇವೆ.   ಈಗ ಇದರ ಸತ್ಯಾಸತ್ಯತೆಯನ್ನು  ತಿಳಿಯಲು ವಿಜ್ಞಾನದ ಸೂತ್ರವಾದ “ಕಾರ್ಯ-ಕಾರಣ ಸಂಬಂಧ” ವನ್ನು ಬಳಸಿ ನೋಡೋಣ.ಆಹಾರ ಸಾಗುತ್ತಿರುವುದು ಕ್ರಿಯೆಯಾದರೆ, ಇರುವೆಗಳು ಪ್ರಯತ್ನಿಸುತ್ತಿರುವುದು ಕಾರಣವಾಗುತ್ತದೆ.

ಈಗ ನಾವೊಂದು ಸರಳ ಪ್ರಯೋಗ ಮಾಡೋಣ ಆಗ ಅವುಗಳ ಪ್ರಯತ್ನ ಎಂತಹುದು, ಅವುಗಳಲ್ಲಿ ಒಗ್ಗಟ್ಟಿದೆಯೇ ಎಂಬುದು ತಿಳಿಯುತ್ತದೆ. ತಳ್ಳುತ್ತಿರುವ ಇರುವೆಗಳು ಆಹಾರ ಹಿಡಿದಿರುವ ಜಾಗಕ್ಕೆ ಸರಿಯಾಗಿ ಸ್ಕೇಲಿನ ಅಂಚನ್ನೋ ರಟ್ಟಿನ ಅಂಚನ್ನೋ ಮುಟ್ಟಿಸಿ. ತಳ್ಳುವಂತೆ ತೋರುವ  ಇರುವೆಗಳು ಆಹಾರವನ್ನು ಬಿಡುತ್ತವೆ, ಎಳೆಯುವ ಇರುವೆಗಳು ಮುಗ್ಗರಿಸುತ್ತವೆ.

ಅಂದರೆ ಇದರ ಅರ್ಥ ಎಲ್ಲ ಇರುವೆಗಳು ಆಹಾರವನ್ನು ಒಂದೇ ದಿಕ್ಕಿಗೆ ಸಾಗಿಸುತ್ತಿಲ್ಲ, ತಮ್ಮ ತಮ್ಮ ಕಡೆಗೆ ಆಸೆಯಿಂದ ಎಳೆಯುತ್ತಿರುತ್ತವೆ, ಹೆಚ್ಚು ಎಳೆತೆ ವಿರುವ ಕಡೆ ಆಹಾರ ಚಲಿಸುತ್ತದೆ, ಇರುವೆಗಳಲ್ಲಿ ಒಗ್ಗಟ್ಟಿಲ್ಲ ಎನ್ನುವ ಸತ್ಯ ತಿಳಿಯುತ್ತದೆ.

 

ದಾಸೇಗೌಡ. ಎಂ.ಆರ್.

ಚಿತ್ರದುರ್ಗ ವಿಜ್ಞಾನ ಕೇಂದ್ರ.